ಅಂಗನವಾಡಿ ನೌಕರರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹೊರತುಪಡಿಸಿ ಬೇರೆ ಯಾವುದೇ ಕೆಲಸಕ್ಕೆ ನಿಯೋಜಿಸದಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಐದು ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಕಾರ್ಯಕ್ಕೆ ಅಂಗನವಾಡಿ ನೌಕರರನ್ನು ನಿಯೋಜಿಸಲಾಗಿದ್ದು, ಬಳ್ಳಾರಿಯ ಆಶಾ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಇತರ ಸಿಬ್ಬಂದಿ ಸೇರಿದಂತೆ 1.20ಲಕ್ಷ ಮಂದಿಯನ್ನು ‘ಗ್ಯಾರಂಟಿ ಸ್ವಯಂ ಸೇವಕ’ ರನ್ನಾಗಿ ನಿಯೋಜಿಸಲಾಗಿದೆ.. ಫೆಬ್ರುವರಿ 26ರಿಂದ ಸಮೀಕ್ಷೆ ಆರಂಭವಾಗಿದ್ದು, 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಮೊಬೈಲ್ ಅಪ್ಲಿಕೇಷನ್ ಆಧಾರಿತ ಸಮೀಕ್ಷೆ ಇದಾಗಿದ್ದು, ಅಂಗನವಾಡಿ ನೌಕರರು ನಿಗದಿಪಡಿಸಿದ ಮನೆಗಳಿಗೆ ತೆರಳಿ ಐದು ಗ್ಯಾರಂಟಿಗಳ ಕುರಿತು ಪ್ರತಿಯೊಬ್ಬರ ಬಳಿ 35ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ, ಉತ್ತರ ದಾಖಲಿಸಿಕೊಳ್ಳಬೇಕು.
ಸಮಗ್ರ ಶಿಶು ಅಭಿವೃದ್ಧಿಯ ಯೋಜನೆಯ ಕೆಲಸಗಳ ಜೊತೆ ಸಮೀಕ್ಷೆಯನ್ನೂ ನಡೆಸುವಂತೆ ಸರ್ಕಾರ ಸೂಚಿಸಿದೆ. ಆದರೆ, ಇದರಿಂದ ನಮ್ಮ ಮೂಲ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂದು ಅಂಗನವಾಡಿ ನೌಕರು ತಮ್ಮ ಅಳಲು ಹೊರಹಾಕುತ್ತಿದ್ದಾರೆ.
ಬೆಳಗ್ಗೆ 10ರವರೆಗೆ ಸಮೀಕ್ಷೆ, ನಂತರ ಕೆಲಸಕ್ಕೆ ಹಾಜರಾಗಬೇಕು. ಸಂಜೆ 5ರಿಂದ ಮತ್ತೇ ಸಮೀಕ್ಷೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಇನ್ನೂ ಹಲವರಿಗೆ ಸ್ಮಾರ್ಟ್‌ಫೋನ್ ಬಳಕೆ ಗೊತ್ತಿಲ್ಲ ಇವರುಗಳಿಗೆ ಸಮೀಕ್ಷೆ ಕಾರ್ಯ ಕಷ್ಟ. ಗ್ಯಾರಂಟಿಗಳಿಂದ ವಂಚಿತರು ಹೋದಲ್ಲೇಲ್ಲಾ ಕಿರಿಕಿರಿ ಮಾಡುತ್ತಾರೆ. ಅವರುಗಳಿಗೆ ಉತ್ತರಿಸಲಾಗದೇ ಹಲವು ಸಮಸ್ಯೆ, ಸವಾಲು ಎದುರಿಸಬೇಕಾಗಿದೆ ಎಂದು ಮಾಧ್ಯಮದವರ ಮುಂದೆ ಅಂಗನವಾಡಿ ನೌಕರರು ಬೇಸರ ತೋಡಿಕೊಂಡಿದ್ದಾರೆ.
