ಅಂಗನವಾಡಿ ಕಾರ್ಯಕರ್ತರ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೇ 20ರಂದು ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಉಮಾದೇವಿ ಹೇಳಿದರು.
ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿ ಸಿಐಟಿಯು ಹಾಗೂ ರಾಜ್ಯ ಅಂಗನವಾಡಿ ನೌಕರರ ಸಂಘ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಖಾಯಂ ಮಾಡಬೇಕು. ಅಲ್ಲಿವರೆಗೆ ಕನಿಷ್ಠ ವೇತನ ನೀಡಬೇಕು. ಫಲಾನುಭವಿಗಳ ಘಟಕವೆಚ್ಚ ಹೆಚ್ಚಳ ಮಾಡಬೇಕು ಸೇರಿದಂತೆ ಹಲವು ವರ್ಷಗಳಿಂದ ಮೂಲಭೂತ ಬೇಡಿಕೆಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಆದರೆ ಯಾವ ಬೇಡಿಕೆಯೂ ಈಡೇರಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದೇಶದ ಕಾರ್ಪೊರೇಟ್ ಬಂಡವಾಳದಾರರಿಗೆ 1532 ಲಕ್ಷ ಕೋಟಿ ಸಾಲಮನ್ನಾ, 1.97 ಲಕ್ಷ ಕೋಟಿ ಸಬ್ಸಿಡಿಗಳನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರ ದೇಶದ ಭವಿಷ್ಯತ್ತನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗೆಗೆ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಹಾಗೂ ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ ಎಂದು ತಾರತಮ್ಯ ಮಾಡುತ್ತಿದೆ. ಇಂತಹ ಧೋರಣೆಗಳ ವಿರುದ್ಧ ಅಂಗನವಾಡಿ ನೌಕರರ ಸಂಘ ಕಟ್ಟಿ ಮುಷ್ಕರಗಳ ಮುಖಾಂತರ ಹೋರಾಟವನ್ನು ನಡೆಸುತ್ತಿದ್ದರೂ, ಈಗ ದೇಶದ 29 ಕಾರ್ಮಿಕರ ಕಾನೂನುಗಳನ್ನು 04 ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ಸಂಘ ಕಟ್ಟುವ ಹಕ್ಕು, ಮತ್ತು ಮುಷ್ಕರದ ಹಕ್ಕುಗಳಿಗೆ ಹಲವು ರೀತಿಯ ನಿರ್ಬಂಧಗಳನ್ನು ತರುವ ಮೂಲಕ ಸರ್ಕಾರ ಕಾರ್ಮಿಕ ವರ್ಗದವರಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದೆ. ಇದನ್ನು ರದ್ದುಗೊಳಿಸಬೇಕು” ಎಂದು ಆಗ್ರಹಿಸಿದರು.
“ರಾಜ್ಯ ಸರಕಾರ 2023ರ ಏಪ್ರಿಲ್ 01ರಿಂದ ಗ್ರಾಚ್ಯುಟಿ ಪಾವತಿ ಕಾಯ್ದೆ ಅನ್ವಯಿಸಿ 287 ಕಾರ್ಯಕರ್ತೆಯರಿಗೆ ಹಾಗೂ 1204 ಸಹಾಯಕಿಯರಿಗೆ ಪಾವತಿಸುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಈ ಕಾಯ್ದೆಯನ್ನು 2011 ರಿಂದ ನಿವೃತ್ತಿಯಾದ 10311 ಕಾರ್ಯಕರ್ತೆಯರು 11980 ಸಹಾಯಕಿಯರಿಗೂ ಅನ್ವಯಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಳ್ಳಾರಿ | ಕಿರುಕುಳದಿಂದ ಬೇಸತ್ತು ಅಪ್ರಾಪ್ತ ಬಾಲಕಿ ನೇಣಿಗೆ ಶರಣು; ಓರ್ವನ ಬಂಧನ
“ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು. ಐಸಿಡಿಎಸ್ ಯೋಜನೆಯ ಬಜೆಟ್‌ನ್ನು ಹೆಚ್ಚಿಸಬೇಕು. 26000 ಕನಿಷ್ಠ ವೇತನ 10000 ಮಾಸಿಕ ಪಿಂಚಣಿ ಕೊಡಬೇಕು” ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಎ.ಮಲ್ಲಮ್ಮ, ಟಿ.ಎಸ್.ಖಾಸಬನಿ, ಕೆ.ಗೀತಾ, ಸತ್ಯಬಾಬು, ಉಮಾದೇವಿ, ರಾಣಿ, ಹಾಗೂ ಇತರರು ಉಪಸ್ಥಿತರಿದ್ದರು.