ಶಾಸಕ ಭರತ್ ರೆಡ್ಡಿ ಕಚೇರಿಗೆ ಬಾಂಬ್ ಇರಿಸಿರುವುದಾಗಿ ಬೆದರಿಕೆ ಸಂದೇಶವೊಂದು ಬಂದಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
ಬಾಂಬ್ ಇರಿಸಿದ ಬೆದರಿಕೆ ಹಾಕಿರುವ ಬಂಧಿತ ಯುವಕ 10ನೇ ವಾರ್ಡ್, ಅಂದ್ರಾಳ್ ಗ್ರಾಮದ ಸಂತೋಷ್ ಎಂದು ಹೇಳಲಾಗಿದೆ.
ಭರತ್ ರೆಡ್ಡಿ ಕಚೇರಿಗೆ ಬಾಂಬ್ ಇರಿಸಿರುವುದಾಗಿ ಸೋಮವಾರ ತಡರಾತ್ರಿ ಬೆಂಗಳೂರಿನಲ್ಲಿದ್ದ ಶಾಸಕರ ವಾಟ್ಸಪ್ ನಂಬರ್‌ಗೆ ಸಂದೇಶ ಬಂದಿದೆ. ಇದನ್ನು ಗಮನಿಸಿದ ಶಾಸಕ ಕೂಡಲೇ ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಪೊಲೀಸರು ಬಳ್ಳಾರಿಯಲ್ಲಿರುವ ಶಾಸಕ ಭರತ್ ರೆಡ್ಡಿ ಅವರ ಕಚೇರಿಯನ್ನು ಪರಿಶೀಲನೆ ನಡೆಸಿ ಬಳಿಕ ಬೆದರಿಕೆ ಸಂದೇಶ ಬಂದಿರುವ ವಾಟ್ಸಪ್ ನಂಬರ್ ಟ್ರೇಸ್ ಮಾಡಿ ಬಳ್ಳಾರಿಯ ರೂಪನಗುಡಿ ರಸ್ತೆಯ ಸಂತೋಷ್ ಎಂಬ ಯುವಕನ್ನು ಬಂಧಿಸಿದ್ದಾರೆ.

ಉನ್ನತ ವ್ಯಾಸಂಗ ಮಾಡಿದರೂ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಸಂತೋಷ್ ಸೋಮವಾರ ತಡರಾತ್ರಿ ಕುಡಿದ ಮತ್ತಿನಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅವರ ವಾಟ್ಸಪ್ ನಂಬರ್‌ಗೆ ಈ ಸಂದೇಶವನ್ನು ಕಳುಹಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅಲ್ಲದೆ ಯುವಕನನ್ನು ಪರಿಶೀಲಿಸಿದ ಪೊಲೀಸರಿಗೆ ಯುವಕ ಕುಡಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದನ್ನೂ ಓದಿ: ಬಳ್ಳಾರಿ | ಮಾನವ ಕಲ್ಯಾಣ ಕಾರ್ಯವು ವಿಶ್ವಮಾನ್ಯವಾದುದು: ಪ್ರೊ. ಎಂ ಮುನಿರಾಜು
ಸಂತೋಷ್ ಕುಡಿದ ಅಮಲಿನಲ್ಲಿ ಬೆದರಿಕೆ ಸಂದೇಶ ಕಳುಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಯಾಕಾಗಿ ಈ ರೀತಿ ಸಂದೇಶ ಕಳುಹಿಸಿದ್ದಾನೆ ಎಂಬುದರ ಕುರಿತು ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
