ಹೆತ್ತ ತಾಯಿಯಿಂದಲೇ ₹60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿರುವ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು, ಆಂಧ್ರಪ್ರದೇಶದ ಆಲೂರಿನಿಂದ ಮಗುವನ್ನು ಕರೆ ತಂದಿದ್ದಾರೆ.
ಮಗುವನ್ನು ಖರೀದಿಸಿದ ನವೀನ್ ಕುಮಾರ್ ಮತ್ತು ಮಗುವಿನ ತಾಯಿಯನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಸದ್ಯ ತಾಯಿ ಬಳಿಯೇ ಇರಿಸಲಾಗಿದೆ ಎಂದು ಪೊಲೀಸರ ಮೂಲಗಳು ತಿಳಿಸಿವೆ.
ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾಲೇಜಿನಲ್ಲಿ ಮಹಿಳೆಯು 2024 ಫೆಬ್ರವರಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅದೇ ತಿಂಗಳು ಫೆಬ್ರವರಿ 20ರಂದು 14ದಿನಗಳ ಮಗುವೊಂದು ಬೇರೊಬ್ಬರಿಗೆ ಮಾರಾಟವಾದ ಬಗ್ಗೆ ಜಿಲ್ಲಾ ಮಕ್ಕಳ ಘಟಕದ ಸಹಾಯವಾಣಿಗೆ 2024 ಆಗಸ್ಟ್ 5ರಂದು ಅನಾಮಧೇಯ ಕರೆಯೊಂದು ಬಂದಿತ್ತು. ಕರೆ ಆಧರಿಸಿ ಅಧಿಕಾರಿಗಳು ಪರಿಶೀಲಿಸಿದಾಗ, ಮಗು ಮಾರಾಟವಾಗಿರುವುದು ಖಚಿತವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಬಳ್ಳಾರಿ | ಒಣ ಮೆಣಸಿನಕಾಯಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ
ಮಗು ಕೊಂಡಿರುವ ನವೀನ್‌ಕುಮಾರ್ ಎಂಬಾತ ವೃತ್ತಿಯ ಭಾಗವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಡಾಡುತ್ತಿದ್ದ. ಹೀಗಾಗಿ ಆತನನ್ನು ಪತ್ತೆ ಮಾಡುವುದು ವಿಳಂಬವಾಗಿತ್ತು. ಯಾವುದೋ ಸಂಕಷ್ಟಕ್ಕೆ ಸಿಲಕಿದ ಮಹಿಳೆಗೆ ಮಗು ಬೇಕಿರಲಿಲ್ಲ. ಮಕ್ಕಳಿರದ ಕಾರಣ ನವೀನ್ ಮಗುವನ್ನು ಖರೀದಿಸಿದ್ದ ಎಂದು ತಿಳಿದುಬಂದಿದೆ.
