ಮಗುವಿಗೆ ಒಂಬತ್ತು ತಿಂಗಳು ತುಂಬಿದ ಬಳಿಕ ತಪ್ಪದೇ ರುಬೆಲ್ಲಾ ಅಥವಾ ದಡಾರ ಲಸಿಕೆ ಹಾಕಿಸುವ ಮೂಲಕ ಅಪಾಯಕಾರಿ ದಡಾರವನ್ನು ತಡೆಯಬಹುದು ಎಂದು ಬಳ್ಳಾರಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ಹೇಳಿದರು.
ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನ ಮಾರ್ಗದರ್ಶನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾದ್ಯಂತ ದಡಾರ ಪ್ರಕರಣಗಳು ಈ ಪೂರ್ವದಲ್ಲಿ ವರದಿಯಾದ ಗ್ರಾಮ, ಬಡಾವಣೆಗಳನ್ನು ಗುರಿಯಾಗಿಟ್ಟುಕೊಂಡು ಹಮ್ಮಿಕೊಂಡಿದ್ದ ವಿಶೇಷ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು.
“ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುಸಾಲೆಯಿಂದ ದೇಹದ ಮೇಲೆ ನುಚ್ಚು ಗುಳ್ಳೆಗಳು ಕಂಡುಬರುವುದು ಸಹಜವಾಗಿದ್ದು, ಇದೇ ರೀತಿ ಕಂಡುಬರುವ ದಡಾರ ಸೋಂಕು ಹರಡುವ ಮೈತುಂಬಾ ನುಚ್ಚು ಗುಳ್ಳೆಗಳ ಹಾಗೂ ಅಂತಹ ಮಕ್ಕಳಿಗೆ ಕೆಮ್ಮು, ಜ್ವರ, ಮೂಗಿನಿಂದ ಸುರಿಯುವುದು ಕಂಡುಬಂದು ಆರೋಗ್ಯದಲ್ಲಿ ಗಂಭೀರ ಪರಿಣಾಮ ಉಂಟಾಗಬಹುದು. ಮುಂಜಾಗೃತೆಗಾಗಿ ಮಕ್ಕಳಿಗೆ ದಡಾರ/ರುಬೆಲ್ಲಾ ಲಸಿಕೆ ಹಾಕಿಸಬೇಕು” ಎಂದು ತಿಳಿಸಿದರು.

“ಸಮುದಾಯದಲ್ಲಿ ಅಮ್ಮ, ತಟ್ಟು ಎಂದು ಕರೆಯಲ್ಪಡುವ ದಡಾರ ರೋಗವು ವೈರಸ್‌ನಿಂದ ಹರಡುತ್ತದೆ. ಸೋಂಕು ಹೊಂದಿದ ವ್ಯಕ್ತಿಯಿಂದ ವ್ಯಕ್ತಿ ಸಂಪರ್ಕದ ಮೂಲಕ ಕೆಮ್ಮು ಮತ್ತು ಸೀನುವಿಕೆಯಿಂದ ಇನ್ನೊಬ್ಬರಿಗೆ ಹರಡುತ್ತದೆ. ರೋಗವನ್ನು ನಿರ್ಲಕ್ಷಿಸಿದಲ್ಲಿ ಮಾರಣಾಂತಿಕವಾಗಬಹುದು. ಹಾಗಾಗಿ ಸಾರ್ವಜನಿಕರು ತಮ್ಮ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಹಾಗೂ ಒಂದೂವರೆ ವರ್ಷದ ಅವಧಿಯಲ್ಲಿ ತಪ್ಪದೇ ಲಸಿಕೆ ಹಾಕಿಸಿ” ಎಂದು ವಿನಂತಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ. ಆರ್ ಎಸ್ ಶ್ರೀಧರ ಮಾತನಾಡಿ, “ದಡಾರ ಸೋಂಕಿತ ವ್ಯಕ್ತಿಗೆ ಸುಮಾರು 10 ದಿನಗಳ ನಂತರ ದಡಾರದ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ದಡಾರದ ಅತ್ಯಂತ ಪ್ರಮುಖ ಲಕ್ಷಣವೆಂದರೆ ಕೆಂಪು ಬಣ್ಣದ ದದ್ದು(ಗುಳ್ಳೆ), ಆದರೆ ಇದು ಸಾಮಾನ್ಯವಾಗಿ ಮೊದಲ ಲಕ್ಷಣವಲ್ಲ. ದಡಾರವು ಸಾಮಾನ್ಯವಾಗಿ ಜ್ವರ ತರಹದ ಕಾಯಿಲೆಯಾಗಿ ಪ್ರಾರಂಭವಾಗುತ್ತದೆ. 2 ರಿಂದ 4 ದಿನಗಳವರೆಗೆ ಇರುತ್ತದೆ” ಎಂದು ತಿಳಿಸಿದರು.
ದಡಾರ ಲಕ್ಷಣಗಳ ಕುರಿತು ಮಾತನಾಡಿ, “ಜ್ವರ, ಆಯಾಸ, ತೀವ್ರ ಕೆಮ್ಮು, ಕಾಂಜಂಕ್ಟಿವಿಟಿಸ್(ಕೆಂಪು ಕಣ್ಣುಗಳು), ಸ್ರವಿಸುವ ಮೂಗು, ಬಾಯಿಯಲ್ಲಿ ಬಿಳಿ ಚುಕ್ಕೆಗಳು(ಕೊಪ್ಲಿಕ್ ಚುಕ್ಕೆಗಳು ಎಂದು ಕರೆಯಲಾಗುತ್ತದೆ) ಇವು ಅನಾರೋಗ್ಯದ 3 ರಿಂದ 7 ದಿನಗಳಲ್ಲಿ ದದ್ದು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಕೆಂಪು ಮತ್ತು ಮಚ್ಚೆಯಿಂದ ಕೂಡಿರುತ್ತದೆ. ಆದರೆ ತುರಿಕೆ ಇರುವುದಿಲ್ಲ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹ
“ದಡಾರದ ದದ್ದು ಸಾಮಾನ್ಯವಾಗಿ ತಲೆಯ ಮೇಲೆ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಉಳಿದ ಭಾಗಗಳಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ 4 ರಿಂದ 7 ದಿನಗಳವರೆಗೆ ಇರುತ್ತದೆ. ಒಂದು ವೇಳೆ ನಿರ್ಲಕ್ಷಿಸಿದರೆ ವಾಂತಿ-ಭೇದಿ, ನ್ಯುಮೋನಿಯಾ ಉಂಟಾಗಿ ಮಗು ಮರಣ ಹೊಂದಬಹುದು. ಈ ಹಿನ್ನಲೆಯಲ್ಲಿ ಪ್ರಸ್ತುತ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹೆಚ್ಚುವರಿಯಾಗಿ ಒಂದು ಡೋಸ್ ಲಸಿಕೆ ಹಾಗೂ ಇದರೊಂದಿಗೆ ವಿಟಾಮಿನ್-ಎ ಅನ್ನಾಂಗ ದ್ರಾವಣವನ್ನೂ ನೀಡಲಾಗುತ್ತಿದ್ದು, ತಪ್ಪದೇ ಹಾಕಿಸಬೇಕು” ಎಂದು ಹೇಳಿದರು.
ಇದೇ ವೇಳೆ ನಗರದ ಗುಗ್ಗರಹಟ್ಟಿ, ಕಾರ್ಕಲತೋಟ ಕೌಲ್‌ಬಜಾರ್, ಆಶ್ರಯ ಕಾಲೋನಿಗಳಲ್ಲಿ ಲಸಿಕಾ ಕಾರ್ಯ ಪರಿಶೀಲಿಸಿದರು.
ಡಾ. ಕಾಶಿಪ್ರಸಾದ್, ಡಾ.ಶಗುಪ್ತಾ ಶಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂಜುಳಾ, ನಾಗಲಕ್ಷ್ಮಮ್ಮ, ಜ್ಯೋತಿ, ಆರೋಗ್ಯ ನಿರೀಕ್ಷಣಾಧಿಕಾರಿ ಈರಯ್ಯ, ಮುದಸ್ಸೀರ್ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.
