ನಗರದ ಜನತೆ ಈಗಾಗಲೇ ಮೂಲಸೌಕರ್ಯಗಳ ಕೊರತೆಯಿಂದ ರೋಸಿ ಹೋಗಿದ್ದಾರೆ, ಅಲಂಕಾರಿಕ ಮತ್ತು ವೃತ್ತ ನಿರ್ಮಾಣದಂತ ಅನವಶ್ಯಕ ಖರ್ಚುಗಳ ಕಾಮಗಾರಿಗಳನ್ನು ನಿಲ್ಲಿಸಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ತಡೆಯಬೇಕು ಎಂದು ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ್ ನಗರಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಮಹಾನಗರಪಾಲಿಕೆಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಾಲಿಕೆಯ ಅವ್ಯವಸ್ಥೆಯ ಪಟ್ಟಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ನಗರದಲ್ಲಿ, ವಿದ್ಯುತ್, ಚರಂಡಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳು ಹದಗೆಟ್ಟು ಹೋಗಿವೆ. ನಗರದ ಅತ್ಯಂತ ಮುಖ್ಯ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗೆದು ವೃತ್ತಗಳನ್ನು ನಿರ್ಮಿಸುವುದು ಅಲಂಕಾರ ಮಾಡುವುದು ಸೇರಿದಂತೆ ಇತರೆ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಇಂಥ ಸೌಂದರೀಕರಣ ಕೆಲಸವನ್ನು ಬಿಟ್ಟು ನಾಗರಿಕರಿಗೆ ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಬೇಕು” ಎಂದು ಒತ್ತಾಯಿಸಿದರು.

ಡಾ. ಪ್ರಮೋದ್ ಎನ್ ಮಾತನಾಡಿ, “ನಗರದಲ್ಲಿ ಭಾರೀ ವಾಹನಗಳ ಸಂಚಾರದಿಂದ ಸುರಕ್ಷತೆ ಇಲ್ಲದಂತಾಗಿದೆ. ಇದನ್ನು ತಡೆಯಲು ನಗರಕ್ಕೆ ಅವಶ್ಯಕವಾದ ವರ್ತುಲ ರಸ್ತೆಯನ್ನು ತುರ್ತಾಗಿ ನಿರ್ಮಿಸಬೇಕು. ನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಯಲು ತುರ್ತುಕ್ರಮ ಕೈಗೊಳ್ಳಬೇಕು” ಎಂದರು.
ಇದನ್ನೂ ಓದಿ: ಬಳ್ಳಾರಿ | ಚೀಲದಲ್ಲೇ ಮೊಳಕೆಯೊಡೆದ ಜೋಳ; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಪಾಲಿಕೆಯ ಆಯುಕ್ತ ಜಿ. ಖಲೀಲ್ ಸಾಬ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, “ರಸ್ತೆಗಳ ಗುಂಡಿಗಳನ್ನು ಮುಚ್ಚಲು ಹಾಗೂ ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಲು ಕ್ರಮಕೈಗೊಳ್ಳುವುದಾಗಿ ಹಾಗೂ ಇತರೆ ಬೇಡಿಕೆಗಳಿಗೆ ಸಂಬಂಧಿಸಿದಂತೆ 10 ದಿನಗಳ ಒಳಗಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜನತೆಯ ಕುಂದುಕೊರತೆ ಸಭೆ ಕರೆಯುತ್ತೇವೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶಾಂತಾ, ನಾಗರತ್ನ, ಶರ್ಮಾಸ್, ಸುರೇಶ್ ಜಿ, ವಿದ್ಯಾ, ಶಾಂತಿ, ಜಾಫರ್, ಬಾಬು, ಚಂದ್ರಶೇಖರ್, ಅಬ್ಬಾಸ್, ರಮೇಶ್, ಉಮಾಮಹೇಶ್, ಶಚೀರ್, ಆಂಥೋನಿ ಸೇರಿದಂತೆ ಇತರರು ಇದ್ದರು.