ಕೋಮು ಪ್ರಚೋದನೆ ಪ್ರಕರಣಗಳ ಸಂಖ್ಯೆಗಳು ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ವಾಗುತ್ತಲೇ ಇವೆ. ಐದು ವರ್ಷಗಳಲ್ಲಿ ಕೋಮುವಾದ ಪ್ರಚೋದಿಸುವ ಮತ್ತು ದ್ವೇಷ ಭಾಷಣ ವೈಭವೀಕರಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ 483 ಪ್ರಕರಣಗಳು ದಾಖಲಾಗಿವೆ ಎಂದು ಬಳ್ಳಾರಿ ಎಸ್‌ಪಿ ಶೋಭಾರಾಣಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 2020ರಿಂದ 2024ರವರೆಗಿನ 5 ವರ್ಷಗಳಲ್ಲಿ ಕೋಮುವಾದ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ 56 ಪ್ರಕರಣ, ಮಂಗಳೂರು ನಗರದಲ್ಲಿ 36, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 33 ಪ್ರಕರಣಗಳು ದಾಖಲಾಗಿವೆ.
ಬಾಗಕಲಕೋಟೆ 29, ಕೊಡಗು 27, ಮಂಡ್ಯದಲ್ಲಿ 26, ಬೆಳಗಾವಿ ನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ 25, ದಾವಣಗೆರೆ 24, ಧಾರವಾಡ ಜಿಲ್ಲೆಯಲ್ಲಿ 22 ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ 19 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ಚಾಮರಾಜನಗರ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಥ ಪ್ರಕರಣ ವರದಿಯಾಗಿಲ್ಲ ಎಂದು ಗೃಹ ಇಲಾಖೆಯ ಮೂಲಗಳು ಹೇಳುತ್ತವೆ.
ನಾಲ್ಕು ವರ್ಷಗಳಿಂದ ಒಂದೂ ಕೋಮುವಾದದ ಪ್ರಕರಣ ಕಾಣದ ಮಂಡ್ಯ ಜಿಲ್ಲೆಯಲ್ಲಿ 2024ರಲ್ಲಿ ಒಂದೇ ವರ್ಷ 26 ಪ್ರಕರಣ ದಾಖಲಾಗಿವೆ. ಈ ಸಾಲಿನಲ್ಲಿ ಜಿಲ್ಲೆಯೊಂದರಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆ ಪ್ರಕರಣಗಳಿವು.
ಸುಳ್ಳು ಸುದ್ದಿಯ 247 ಪ್ರಕರಣ
“ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದ ಹರಡಲು ಸುಳ್ಳುಸುದ್ದಿಗಳೂ ನೆರವಾಗುತ್ತಿವೆ. 2021ರಿಂದ 2024ರವರೆಗೆ ಇಂಥ 247 ಪ್ರಕರಣ ವರದಿಯಾಗಿದೆ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಇದರಲ್ಲಿ ಬೆಂಗಳೂರು ನಗರ 99 ಸುಳ್ಳು ಸುದ್ದಿಗಳ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ಜಿಲ್ಲೆ 45, ಕೊಡಗು 3, ಶಿವಮೊಗ್ಗ 10, ತುಮಕೂರು 9 ಸುದ್ದಿಗಳ ಮೂಲಕ ಮೊದಲ ಐದು ಸ್ಥಾನದಲ್ಲಿವೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಸಾಮಾಜಿಕ ಮಾಧ್ಯಮಗಳಲ್ಲಿ ಆಗುವ ಚರ್ಚೆಗಳನ್ನು ನಿರಂತರ ಪರಿಶೀಲಸುತ್ತೇವೆ. ಅನುಮಾನಾಸ್ಪದ ಗುಂಪುಗಳ ಪಟ್ಟಿ ನಮ್ಮ ಬಳಿ ಇದೆ. ಹಾನಿಕಾರಕ ಪೋಸ್ಟ್‌ಗಳು ಕಂಡರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ” ಎಂದರು.
“ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಪ್ರಚೋದನಾಕಾರಿ ಅಂಶಗಳ ಮೇಲೆ ನಿಗಾವಹಿಸಲು ಪ್ರತಿ ಜಿಲ್ಲೆಯ ಪ್ರತಿ ಠಾಣೆ ಸಿಇಎನ್(ಸೈಬರ್ ಅಪರಾಧ ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಪೊಲೀಸ್) ವಿಭಾಗ ಎಸ್‌ಪಿ ಕಚೇರಿಯಲ್ಲಿ ‘ಸಾಮಾಜಿಕ ಮಾಧ್ಯಮ ವಿಚಕ್ಷಣಾ’ ತಂಡ ಇದೆ. ಈ ತಂಡಗಳು ಸ್ಥಳೀಯ ಮತ್ತು ಜಿಲ್ಲೆಯಲ್ಲಿ ಚರ್ಚೆಯಾಗುವ ವಿಷಯಗಳನ್ನು ಗಮನಿಸುತ್ತವೆ. ‘ಪೊಲೀಸ್ ಸಿಬ್ಬಂದಿಯೇ ಕೆಲ ಅನುಮಾನಾಸ್ಪದ ಗುಂಪುಗಳಲ್ಲಿ ಗೌಪ್ಯವಾಗಿ ಸೇರಿ ಅಲ್ಲಿನ ವಿಷಯಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಸಮಾಜಕ್ಕೆ ಹಾನಿಕರ ವಿಷಯಗಳು ಪೋಸ್ಟ್ ಆಗಿರುವುದು ಕಂಡುಬಂದರೆ ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗುತ್ತದೆ. ಬಳಿಕ ಸಂಬಂಧಿಸಿದವರನ್ನು ಕೂಡಲೇ ಕರೆಸಿ ಪೋಸ್ಟ್ ಡಿಲೀಟ್ ಮಾಡಲಾಗುತ್ತದೆ ಅಥವಾ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಬಳ್ಳಾರಿಯ ಸಿಇಎನ್ ವಿಭಾಗದ ಡಿವೈಎಸ್‌ಪಿ ಸಂತೋಷ್ ಚೌಹಾಣ್ ತಿಳಿಸಿದರು.
ಕೋಮುವಾದ ಪ್ರಕರಣಗಳ ಸಂಖ್ಯೆ ಏರಿಕೆ ವರ್ಷ: ಪ್ರಕರಣ 2020ರಲ್ಲಿ 51, 2021ರಲ್ಲಿ 72, 2022ರಲ್ಲಿ 99, 2023ರಲ್ಲಿ 118, 2024ರಲ್ಲಿ 143ಕ್ಕೆ ಏರಿಕೆಯಾಗಿದೆ.