ಕುಡಿಯುವ ನೀರಿನ ಮೂಲಗಳ ಸಂರಕ್ಷಣೆಯು ಸಾರ್ವಜನಿಕರ ಆದ್ಯತೆಯೂ ಆಗಿದ್ದು, ಅವುಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯುವ ಮೂಲಕ ಸಂಭಾವ್ಯ ವಾಂತಿ-ಭೇದಿ ಪ್ರಕರಣಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಹೇಳಿದರು.
ನಗರದ ಗೌತಮ್ ನಗರ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, “ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಭೇದಿ ಸೇರಿದಂತೆ ಟೈಫಾಯಿಡ್, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತವೆ. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಕುಡಿಯುವ ನೀರಿನ ಮೂಲಗಳು ಕಲುಷಿತವಾಗುವ ಸಾಧ್ಯತೆ ಇರುತ್ತವೆ. ಮನೆಯ ಮುಂದೆ ನಳದ ಪೈಪ್‌ಗಳು ತಗ್ಗಿನಲ್ಲಿ ಕಂಡುಬರುತ್ತಿದ್ದು, ಇದರಿಂದ ಅನಗತ್ಯ ನೀರು ಸಂಗ್ರಹವಾಗಿ ಪುನಃ ನೀರಿನ ಪೈಪ್‌ಗಳಲ್ಲಿ ವಾಪಸ್ಸು ಹೋಗುವ ಮೂಲಕ ನೀರು ಕಲುಷಿತವಾಗುವ ಸಾಧ್ಯತೆಯಿದೆ. ಈ ಹಿನ್ನಲೆ ನಳದ ಪೈಪ್‌ಗಳು ಮನೆಯ ಮುಂದೆ ನೆಲದ ಮೇಲ್ಮಟ್ಟದಲ್ಲಿ ಇರುವಂತೆ ಜಾಗೃತವಹಿಸಬೇಕು” ಎಂದು ತಿಳಿಸಿದರು.
“ಸಂಭಾವ್ಯ ವಾಂತಿ-ಭೇದಿ ಕಂಡುಬರದಂತೆ ಜಾಗ್ರತೆ ವಹಿಸಲು ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನು ಬಳಸಬೇಕು. ಸಾಧ್ಯವಾದಷ್ಟು ಬಿಸಿ ಆಹಾರ ಸೇವೆನೆಗೆ ಆದ್ಯತೆ ನೀಡಬೇಕು. ರಸ್ತೆ ಬದಿ ತೆರೆದಿಟ್ಟ ಅಥವಾ ಕತ್ತರಿಸಿದ ಹಣ್ಣು ತಿನ್ನಬಾರದು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತಪ್ಪದೇ ತೊಳೆಯಬೇಕು. ಮನೆಯಲ್ಲಿ ವಾಂತಿ-ಭೇದಿ ಅಥವಾ ಕಾಲರಾ ಸೋಂಕಿತರಿದ್ದಲ್ಲಿ ಮನೆಯಲ್ಲೇ ತಯಾರಿಸಿದ ಗಂಜಿ, ಬೇಳೆ ತಿಳಿಸಾರು, ನಿಂಬು ಪಾನಕ ಹಾಗೂ ಸಾಧ್ಯವಾದರೆ ಎಳೆನೀರು ಕೊಡಬೇಕು. ಜಿಲ್ಲೆಯಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡ ಈಗಾಗಲೇ ನಿರಂತರವಾಗಿ ನೀರಿನ ಮೂಲಗಳ ಪರೀಕ್ಷೆ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಂದ ಜಾಗೃತರಾಗಿರಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ಜೂ.16 ರಂದು ಅಕ್ಕಿ, ಗೋಧಿ ಬಹಿರಂಗ ಹರಾಜು
“ವಾಂತಿಭೇದಿ ಉಂಟಾದ ಸಂದರ್ಭದಲ್ಲಿ ದೇಹದ ನಿರ್ಜಲೀಕರಣ ತಡೆಯಲು ಓಆರ್‌ಎಸ್ ಜೀವಜಲ ದ್ರಾವಣವು ಅತ್ಯಂತ ಪರಿಣಾಕಾರಿಯಾಗಿದ್ದು, ಒಂದು ಲೀಟರ್ ನೀರಿಗೆ ಸಂಪೂರ್ಣ ಒಂದು ಪೊಟ್ಟಣದ ಪುಡಿಯನ್ನು ಸ್ವಚ್ಚವಾದ ಪಾತ್ರೆಯಲ್ಲಿ ಹಾಕುವ ಮೂಲಕ ದ್ರಾವಣ ತಯಾರಿಸಿ ಒಂದು ದಿನದ ಒಳಗಡೆ ಜೀವಜಲ ದ್ರಾವಣ ಕುಡಿಯುವ ಮೂಲಕ ಖಾಲಿ ಮಾಡಬೇಕು. 24 ಗಂಟೆಗಳ ನಂತರ ಪುನಃ ಬಳಸಬಾರದು” ಎಂದು ತಿಳಿಸಿದರು.
ಗೌತಮ್ ನಗರ ಬಡಾವಣೆಯ ʼನಮ್ಮ ಕ್ಲಿನಿಕ್ʼ ವೈದ್ಯ ಡಾ.ಸ್ಯಾಮ್ಯುಯೆಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಹೆಚ್‌ಐಒ ದುರ್ಗಾಪ್ರಸಾದ್, ಯೋಗಾನಂದ, ಆಶಾಕಾರ್ಯಕರ್ತೆ ಸಾಜಿಯಾ, ಗೀತಾ, ಸುಮಿತ್ರ, ವೀರಭದ್ರ ಹಾಗೂ ಸಾರ್ವಜನಿಕರು ಇದ್ದರು.