ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಹಳ್ಳಿಗಳಿಗೆ ಕೊಪ್ಪಳ ಜಿಲ್ಲೆಯ ಗೋಪಾಲಕರು ಮೇವು, ನೀರು ಅರಸಿ ತಮ್ಮ ಹಸುಗಳ ಸಮೇತ ವಲಸೆ ಬಂದಿದ್ದಾರೆ.
ಸಿರುಗುಪ್ಪ ತಾಲೂಕಿನ ಎಲ್‌ಎಲ್‌ಸಿ ಕಾಲುವೆ ಮತ್ತು ಇತರೆ ನೀರಿನ ಮೂಲಗಳನ್ನು ಬಳಸಿ ರೈತರು ಭತ್ತ, ಸಜ್ಜೆ, ಜೋಳ ಬೆಳೆದಿದ್ದು, ಕಟಾವು ನಡೆಯುತ್ತಿದ್ದು, ಕಟಾವಿನ ನಂತರ ಸಿಗುವ ಸಿಗುವ ಮೇವು ಮತ್ತು ರೈತರು ನೀಡುವ ಹಣಕ್ಕಾಗಿ ಈ ಹಸುಗಳ ಮಾಲೀಕರು ಕುಟುಂಬ ಸಮೇತ ದರೂರು, ಕರೂರು, ಚಾನಾಳ, ಬಗ್ಗೂರು, ಎಚ್.ಹೊಸಳ್ಳಿ, ತಾಳೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಮ್ಮ ಹಸುಗಳೊಂದಿಗೆ ಬೀಡು ಬಿಟ್ಟಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಮತ್ತು ಬೂದುಗುಪ್ಪ, ಮಲ್ಲಾಪುರ, ಬಂಕಾಪುರ, ಹಳೆಕುಮ್ಮಟ, ಎಚ್‌ಆರ್‌ಜಿ ಕ್ಯಾಂಪ್ ಗ್ರಾಮಗಳಿಂದ ಹಸುಗಳಿಗೆ ತಿನ್ನಲು ಹುಲ್ಲು, ನೀರು ಸಿಗದೆ ಸಾಮೂಹಿಕವಾಗಿ 200ರಿಂದ 400 ಹಸುಗಳ ಸುಮಾರು 80ಕ್ಕೂ ಹೆಚ್ಚು ಜನರ ಗುಂಪು ಕಾಲ್ನಡಿಗೆಯಲ್ಲಿ ಬಳ್ಳಾರಿ ಜಿಲ್ಲೆಗೆ ಬಂದಿದ್ದಾರೆ.
ಈ ಬಾರಿಯ ಬರಗಾಲದಿಂದ ಹಸುಗಳ ಮಾಲೀಕರು ಹೀಗೆ ವಲಸೆ ಬಂದಿದ್ದು, ಭತ್ತ ಕೊಯ್ಲು ಆಗಿರುವ ಗದ್ದೆಗಳಲ್ಲಿ ಹಸುಗಳಿಗೆ ಹಸಿಮೇವು ಸಿಗುತ್ತದೆ ರೈತರ ಹೊಲಗಳಲ್ಲಿ ಒಂದು ರಾತ್ರಿ ಹಸುಗಳನ್ನು ಬಿಡಲು ರೈತರಿಂದ 5 ಸಾವಿರ ರೂ. ತೆಗೆದುಕೊಳ್ಳುತ್ತಿದ್ದು, ಜೀವನೋಪಾಯಕ್ಕೆ ಒಂದಷ್ಟು ಹಣ ದೊರೆಯುತ್ತಿದೆ ಎನ್ನುತ್ತಿದ್ದಾರೆ ವಲಸೆ ಬಂದ ಗೋಪಾಲಕರು.