ಪರಿಶಿಷ್ಟ ಜಾತಿಯ ಅಲೆಮಾರಿ ಚನ್ನದಾಸರ, ಹೊಲೆಯ ಮತ್ತು ಮಾಲದಾಸರ ಸಮುದಾಯಕ್ಕೆ ಶೇ.3ರಷ್ಟು ಮೀಸಲಾತಿ ಕಲ್ಪಿಸಿಕೊಡಲು ಚನ್ನದಾಸ ಸಮುದಾಯ ಸಂಘದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ರಂಗಯ್ಯ ಆಗ್ರಹಿಸಿದರು.
“ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ವರದಿಯ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಚನ್ನದಾಸರ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಮೀಸಲು ನೀಡಬೇಕೆಂದು” ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಮನವಿ ಮಾಡಿದರು.
ನಗರದಲ್ಲಿ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿ ಮಾಧ್ಯಮದ ಜತೆ ಮಾತನಾಡಿ, “ಪರಿಶಿಷ್ಟ ಜಾತಿಯಲ್ಲಿ ಬರುವ ಅಲೆಮಾರಿ ಸಮುದಾಯದ ಚನ್ನದಾಸರ, ವಲಯದಾಸರ, ಮಾಲದಾಸರ ಜಾತಿಗಳಿಗೆ ಕಲ್ಪಿಸಿರುವ ಮೀಸಲಾತಿ ಯಾವುದಕ್ಕೂ ಸಾಲುವುದಿಲ್ಲ. ಚನ್ನದಾಸರ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒಳ ಮೀಸಲಾತಿಯಲ್ಲಿ ಅವಕಾಶ ನೀಡಬೇಕು. ಕಡ್ಡಾಯವಾಗಿ ಮೀಸಲಾತಿ ನಿಗದಿಪಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ಮುತ್ತೂಟ್ ಫಿನ್‌ಕಾರ್ಪ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಈ ವೇಳೆ ಚನ್ನದಾಸರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಹದೇವಪ್ಪ, ಅಧ್ಯಕ್ಷ ಡಿ ಮಂಜುನಾಥ್, ಉಪಾಧ್ಯಕ್ಷ ಏರಿಸ್ವಾಮಿ, ಡಿ ರಾಮಯ್ಯ, ಡಿ ರಂಗಣ್ಣ, ಡಿ ರಾಮಣ್ಣ, ಡಿ ಲಕ್ಷ್ಮಣ ಸೋಮಶೇಖರ್ ಹಾಗೂ ಇತರರು ಇದ್ದರು.
