ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ವೇತನವನ್ನು ಕನಿಷ್ಠ ₹30,000ಕ್ಕೆ ಹೆಚ್ಚಳ ಮಾಡುವಂತೆ ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸುವ ಸಲುವಾಗಿ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಬಳ್ಳಾರಿ ಜಿಲ್ಲೆಯ ಸಂಡೂರು ಶಾಸಕಿ ಅನ್ನಪೂರ್ಣ ತುಕರಾಂ ಅವರಿಗೆ ಮನವಿ ಸಲ್ಲಿಸಿದರು.
“ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ದಾಖಲಾತಿಯಿಂದ ಹಿಡಿದು ಉತ್ತಮ ಫಲಿತಾಂಶ ಬರುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದಾರೆ. ಆದರೆ ಈಗ ಬರುವ ವೇತನದಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವೇತನ ಹೆಚ್ಚಳ ಮಾಡಬೇಕು” ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದರು.
“ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸರಿಸುಮಾರು 4,659ಕ್ಕೂ ಅಧಿಕ ಮಂದಿ ಅತಿಥಿ ಉಪನ್ಯಾಸಕರು ಮಾಸಿಕ ₹12,000ಕ್ಕೆ ಕಾರ್ಯವನ್ನು ನಿರ್ವಹಿಸುತ್ತಿದ್ದು, ಇಂದಿನ ದಿನಮಾನಗಳಲ್ಲಿ ನಗರ ಪ್ರದೇಶಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ನಿತ್ಯ ಬಳಸುವ ಪದಾರ್ಥಗಳ ದರ ಹೆಚ್ಚಾಗುತ್ತಿದೆ. ಹಲವಾರು ಆರ್ಥಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಮಕ್ಕಳ ಶಾಲೆ ಶುಲ್ಕ, ವಯಸ್ಸಾದ ಅಪ್ಪ-ಅಮ್ಮನ ಆನಾರೋಗ್ಯದ ಸ್ಥಿತಿ, ಮನೆ ಬಾಡಿಗೆ, ಅಂಗಡಿ ಸಾಮಾನು, ಹೀಗೆ ಸಾಕಷ್ಟು ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಅತಿಥಿ ಉಪನ್ಯಾಸಕರ ನಿತ್ಯ ಜೀವನದ ಎತ್ತಿನ ಬಂಡಿಯ ಹಗ್ಗ-ಜಗ್ಗಾಟ ಹಳ್ಳ ಹಿಡಿಯುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆಯುತ್ತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ. ಆದರೆ ಯಾವುದೇ ಸೇವಾ ಭದ್ರತೆ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಅನೇಕ ಹೋರಾಟಗಳ ಮೂಲಕ ಸಮಸ್ಯೆಗಳನ್ನು ಗಮನಕ್ಕೆ ತರಲಾಗಿದೆ. ಆದರೂ ಸರ್ಕಾರ ಮಾತ್ರ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಕೆನರಾ ಬ್ಯಾಂಕ್ ಲಾಕರ್‌ನಲ್ಲಿದ್ದ ನಗದು ನೋಟುಗಳಿಗೆ ಗೆದ್ದಲು; ಗ್ರಾಹಕನ ₹8 ಲಕ್ಷ ನಷ್ಟ
“ಬಹುತೇಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅನೇಕ ಬೋಧನಾ ಹುದ್ದೆಗಳಿಗೆ ಖಾಯಂ ಉಪನ್ಯಾಸಕರು ಇಲ್ಲದೆ ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ಹಾಗೂ ಬೋಧನಾ ತರಗತಿಗಳು ಮುನ್ನಡೆಯುತ್ತಿವೆ. ಖಾಯಂ ಉಪನ್ಯಾಸಕರಿಗಿಂತಲೂ ಹೆಚ್ಚು ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸುವುದು ನ್ಯಾಯಸಮ್ಮತವಾಗಿದೆ. ಹಾಗಾಗಿ ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಕನಿಷ್ಠ ವೇತನವನ್ನು ₹30,000ಕ್ಕೆ ಹೆಚ್ಚಳ ಮಾಡುವುದಕ್ಕಾಗಿ ಅನುದಾನ ಒದಗಿಸಬೇಕು” ಎಂದು ಮನವಿ ಮಾಡಿದರು.
ಅತಿಥಿ ಉಪನ್ಯಾಸಕಕರು ಜಯಮ್ಮ, ಪ್ರಿಯಾ ಬಣಾಕಾರ್, ಗೀತಾ, ದಿವ್ಯ, ಸಂಪತ್ ಕುಮಾರ್, ಸಿದ್ದೇಶ್, ರೇಣುಕಾ, ತರುಣ್ ಕುಮಾರ್, ನಾಗರಾಜ್ ಹಲವಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು
