ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಕೈಬಿಟ್ಟು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಸಂಡೂರು ತಾಲೂಕು ಸಮಿತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದರು.
ರಾಜ್ಯಾದ್ಯಂತ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ 2,64,625ಕ್ಕೂ ಅಧಿಕ ಅರಣ್ಯ ಉತ್ಪನ್ನ ಭೂ ಉಳಿಮೆದಾರರು ಹಕ್ಕು ಮಂಡಿಸಿ ಅರ್ಜಿಸಲ್ಲಿಸಿದ್ದಾರೆ. ಕೇವಲ 16,136 ಅರ್ಜಿಗಳನ್ನು ಪುರಸ್ಕರಿಸಿ 21,470 ಅರ್ಜಿಗಳನ್ನು ತಿರಸ್ಕೃತ ಅಥವಾ ವಿಲೇವಾರಿಗೆ ಬಾಕಿ ಉಳಿಸಲಾಗಿದೆ. ಸಂಡೂರು ತಾಲೂಕು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ 1,612 ಪರಿಶಿಷ್ಟ ಪಂಗಡ/ಪರಿಶಿಷ್ಟ ಜಾತಿ ಹಾಗೂ ಇತರೆ 2,138 ಮಂದಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಭೂಮಿ ಸಾಗುವಳಿ ಮಾಡುವ ಬಡವರು, ಅನಕ್ಷರಸ್ಥರು, ರೈತರು ಹಾಗೂ ಅರ್ಜಿ ಸಲ್ಲಿಸದ ರೈತರು ಸೇರಿದಂತೆ ಸುಮಾರು 5000ಕ್ಕೂ ಹೆಚ್ಚು ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಭೂಮಿ ಹಕ್ಕುಪತ್ರ ಪಡೆಯಲು ಅರ್ಹರಿದ್ದಾರೆ. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ಭೂಮಿಯಿಂದ ವಂಚಿಸಲಾಗಿದೆ. ಅರ್ಜಿಗಳನ್ನು ಸ್ವೀಕೃತ ಹಾಗೂ ಹಿಂಬರಹವನ್ನು ನೀಡಿರುವುದಿಲ್ಲ” ಎಂದು ಆರೋಪಿಸಿದರು
“ಗ್ರಾಮಸಭೆ, ಅರಣ್ಯ ಹಕ್ಕುಸಭೆ ನಡೆಸದೆ, ಸುಳ್ಳು ದಾಖಲೆ ಸೃಷ್ಟಿಸಿ ಅರ್ಜಿಗಳನ್ನು ತಿರಸ್ಕರಿಸಿ ಅರಣ್ಯ ಹಕ್ಕು ಕಾಯ್ದೆ ಆಡಿ ಅರ್ಜಿ ಸಲ್ಲಿಸಿದ ರೈತರನ್ನು ವಂಚಿಸಿ ಸಾಗುವಳಿ ಪತ್ರ ನೀಡಲು ನಿರಾಕರಿಸಲಾಗುತ್ತಿದೆ. ಸರ್ಕಾರದ ಜಮೀನಿನಲ್ಲಿ ಸಾಗುವಳಿ ಮಾಡಿ 51, 53, 57 ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದ ಸುಮಾರು 11,000ಕ್ಕೂ ಹೆಚ್ಚಿನ ಬಡ ರೈತರಿಗೂ ಹಕ್ಕುಪತ್ರ ನೀಡಿರುವುದಿಲ್ಲ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ವಂಚಿತರಾಗಿದ್ದಾರೆ. ದೊಡ್ಡ ದೊಡ್ಡ ಬಂಡವಾಳದಾರರು, ಗಣಿ ಮಾಲೀಕರಿಗೆ ಉದಾರವಾಗಿ ನೂರಾರು ಎಕರೆ ಭೂಮಿಯನ್ನು ನೀಡಲಾಗುತ್ತದೆ. ಆದರೆ ಬಡವರು ತಮ್ಮ ಬದುಕಿಗಾಗಿ ಇಟ್ಟುಕೊಂಡಿರುವ ಸಣ್ಣ ತುಂಡು ಬೂಮಿಯನ್ನು ಸರ್ಕಾರ ಕಸಿಯುವ ಹುನ್ನಾರ ನಡೆಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂಡೂರು ಹೇರಳ ಖನಿಜ ಸಂಪತ್ತಿನೊಂದಿಗೆ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದರೂ ತಾಲೂಕಿನ ಜನತೆ ಸಂಕಷ್ಟದಲ್ಲಿ ಬದುಕಬೇಕಾಗಿದೆ. ಕೃಷಿ ಅಭಿವೃದ್ಧಿ ಹೊಂದುತ್ತಿರುವ ಸಮುದಾಯವೂ ಕೂಡಾ ಈಗ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದಡೆ ರೈತರ ಜಮೀನುಗಳು ಗಣಿಗಾರಿಕೆ, ಕೈಗಾರಿಕೆ ಚಟುವಟಿಕೆಗಳಿಂದ ಅತಿಕ್ರಮಿಸಲ್ಪಟ್ಟಿವೆ. ಮತ್ತೊಂದಡೆ ಸಾಗುವಳಿ ಭೂಮಿಗೆ ಹಕ್ಕುಪತ್ರ ಇಲ್ಲದೆ ಭೂ ಸಂಬಂಧಿ ಸಮಸ್ಯೆಗಳು, ಧೂಳಿನಿಂದ, ಪ್ರಕೃತಿಯ ವಿಕೋಪ, ಕಾಡು ಪ್ರಾಣಿಗಳ ದಾಳಿಯಿಂದ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ಇಲ್ಲದಂತಾಗಿದೆ. ತಾಲೂಕಿನಲ್ಲಿ 14,359 ಎಕರೆ ಭೌಗೋಳಿತ ಪ್ರದೇಶವಿದ್ದರೂ 34.290 ಜೆ ಮಾತ್ರ ಉಳುಮೆ ಭೂಮಿಯಿದೆ. ಈ ಪೈಕಿ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳು, ಮೈನಿಂಗ್ ಸ್ಟಾಕ್ ಯಾರ್ಡ್ ಸೇರಿದಂತೆ ನಾನಾ ವಾರೇ ಕೆಲಸಗಳಿಗೆ 4 ಸಾವಿರ ಎಕರೆಗೂ ಹೆಚ್ಚು ಭೂಮಿ ಬಳಕೆಯಾಗುತ್ತಿದೆ. ಉಳಿದ 30 ಸಾವಿರ ಎಕರೆಗೂ ಕಡಿಮೆ ಸಾಗುವಳಿ ಭೂಮಿಯಲ್ಲಿ ತಾಲೂಕಿನ 2.25 ಲಕ್ಷದಷ್ಟಿರುವ ಜನಸಂಖ್ಯೆ, ಬದುಕು ಕಟ್ಟಿಕೊಳ್ಳಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಕೈಗಾರಿಕೆಗಳು, ಗಣಿಗಾರಿಕೆ ಲಾಭದಾಯಕವಾಗುತ್ತಿವೆ” ಎಂದರು.
“ಕರ್ನಾಟಕದಲ್ಲಿ ಒಟ್ಟು 446 ಗ್ರಾಮಗಳನ್ನು ಗಣಿಗಾರಿಕೆ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿಯೇ 146 ಗ್ರಾಮಗಳನ್ನು ಗಣಿಗಾರಿಕೆ ಪೀಡಿತ ಪ್ರದೇಶಗಳೆಂದು ಸೂಚಿಸಲಾಗಿದೆ. ಗಣಿ ಕೈಗಾರಿಕೆಗಳಿಂದ ಹರಡಿರುವ ಧೂಳು ಮತ್ತು ಅಪಾಯಕಾರಿ ತ್ಯಾಜ್ಯ ಸುರಿಯುವುದು ಸ್ಥಳೀಯ ಪರಿಸರ ಹಾಗೂ ಸಾರ್ವಜನಿಕ ಅರೋಗ್ಯವನ್ನು ಮತ್ತಷ್ಟು ಹಾಳುಮಾಡಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ತೀವ್ರವಾದ ಉಸಿರಾಟ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಡಿಸೆಂಬರ್ 9ರಂದು ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆವಾರು ಅಂಕಿಅಂಶಗಳು ಮಾದರಿ ತಾಲೂಕಿನ ಅಸಹಾಯಕತೆ, ಸೌಲಭ್ಯಗಳ ಕೊರತೆ ಎಂತಹ ನಾಗರಿಕರನ್ನೂ ಬೆಚ್ಚಿ ಬೀಳಿಸುತ್ತದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಕೊರತೆ ರೇಡಿಯೋಲಾಜಿಸ್ಟ್, ಸ್ತ್ರೀರೋಗ ತಜ್ಞರು, ಚರ್ಮ ರೋಗ ತಜ್ಞರು, ಮಕ್ಕಳ ತಜ್ಞರು, ಕಣ್ಣಿನ ಡಾಕ್ಟರ್, ಲ್ಯಾಬ್ ಟೆಕ್ನಿಷಿಯನ್ಸ್ ಹಾಗೂ 108 ವಾಹನಗಳೂ ಇಲ್ಲವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಎಸ್ ದಿವಾಕರ್ ಸಂಕಿನ ದಾಸ್ ಹೋರಾಟದ ಸ್ಥಳಕ್ಕೆ ಭೀಟಿ ನೀಡಿ, ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರನ್ನು ಒಕ್ಕಲಿಬ್ಬಿಸುವುದಿಲ್ಲವೆಂದು ಜಿಲ್ಲಾಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಅರ್ಜಿಗಳ ಪುನರ್ ಪರಿಶೀಲನೆಗೆ ಗ್ರಾಮ ಪಂಚಾಯತಿಗಳಲ್ಲಿ ಸಭೆ ನಡೆಸಿ ಎರಡು ತಿಂಗಳ ಒಳಗಾಗಿ ಸರಿಯಾಗಿರುವ ಅರ್ಜಿಗಳಿಗೆ ಪಟ್ಟಾ ನೀಡಲಾಗುವುದೆಂದು ಹೇಳಿದ ಬಳಿಕ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ ಎಸ್ ಶಿವಶಂಕರ್ ಸಂಡೂರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಾಳೆ ಲೋಕಾರ್ಪಣೆ
ತಾಲೂಕು ಕಾರ್ಯದರ್ಶಿ ಕಲಂದರ್ ಬಾಷ ಎಂ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರಿಗೆ ವಿಮೊಚನ ಸಂಘದ ಜಿಲ್ಲಾ ಕಾರ್ಯದರ್ಶಿ ಎ ಸ್ಟಾಮಿ, ಸಂಡೂರು ತಾಲೂಕು ಕಾರ್ಯದರ್ಶಿ ಹೆಚ್ ದುರ್ಗಮ್ಮ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಎಸ್ ಕಾಲುಬ, ರೈತರುಗಳಾದ ಪರಮೇಶ್ ಕೇರಳಪ್ಪ, ಸಿದ್ದಪ್ಪ, ತಾಯಪ್ಪ, ಚಂದ್ರಪ್ಪ, ಹುಲಿಯಪ್ಪ, ತಾಯಮ್ಮ, ಈರಮ್ಮ, ಲಕ್ಷ್ಮಿ, ನೀಲಮ್ಮ, ಲಕ್ಷ್ಮೀದೇವಿ ಸೇರಿದಂತೆ ಇತರರು ಇದ್ದರು.