ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬೇಸಿಗೆ ಆರಂಭವಾದಾಗಿನಿಂದ ಬಿಸಿಲಿನ ತಾಪದ ಜತೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಸಾವಿರಾರು ಅಡಿ ಆಳಕ್ಕೆ ಭೂಮಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಆ ಭಾಗದ ಜನ ಬೇರೆ ದಾರಿ ಇಲ್ಲದೆ ಬತ್ತಿ ಹೋಗಿರುವ ನದಿಗಳಲ್ಲಿ ಕೊಳವೆಬಾವಿ ಕೊರೆಯಲು ಮುಂದಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ 5 ತಾಲೂಕುಗಳಲ್ಲಿ ಕೆರೆಕಟ್ಟೆಗಳೆಲ್ಲ ಒಣಗಿ ಬರಡಾಗಿ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಅಭಾವ ಮತ್ತಷ್ಟು ಹೆಚ್ಚಾಗಬಹುದಾದ ಸಾಧ್ಯತೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ನೀರಿನ ಸಮಸ್ಯೆ ಎದುರಿಸಲು ಸಿದ್ಧವಿರುವಂತೆ ಸಂಬಂಧಿಸಿದ ಇಲಾಖೆಗೆ ಈಗಾಗಲೇ ಸೂಚನೆ ನೀಡಿದೆ.
ಈಗಾಗಲೇ ಬಳ್ಳಾರಿ, ಸಿರಗುಪ್ಪ, ಕುರುಗೋಡು, ಸಂಡೂರು, ಕಂಪ್ಲಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡು ಬಂದಿವೆ. ಆ ಗ್ರಾಮಗಳಿಗೆ ಹೋಗಿ ಪಂಚಾಯತ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಬೇಸಿಗೆಯಲ್ಲಿ ನೀರಿಗೆ ತತ್ವಾರ:
ಬೇಸಿಗೆ ಬಂತೆಂದರೆ ನೀರಿಗೆ ಎಲ್ಲಿಲ್ಲದ ತತ್ವಾರ ಶುರುವಾಗುತ್ತದೆ. ಹನಿ ನೀರು ಕೂಡ ಮರೀಚಿಕೆಯಂತಾಗುತ್ತದೆ. ಏಪ್ರಿಲ್ ಹಾಗೂ ಮೇ ಹೊತ್ತಿಗೆ ಮತ್ತಷ್ಟು ಬಿಸಿಲಿನ ಕಾವು ಹೆಚ್ಚಾಗಿ ಭೂಮಿ ಕಾದಹಂಚಿನಂತಾಗುತ್ತದೆ. ಜನ ಮನೆಯಿಂದ ಹೊರ ಬರಲೂ ಬೇಸರ ಪಟ್ಟುಕೊಳ್ಳುವ ಸ್ಥಿತಿ ಎದುರಾಗುತ್ತದೆ. ಈ ಬಿಸಿಲ ಹವಾಮಾನದಲ್ಲಿ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ನೀರಿನ ಕೊರತೆ ಎದುರಿಸುತ್ತಾರೆ. ನೀರಿಗಾಗಿ ತಳ್ಳುವ ಬಂಡಿಗಳ ಮೂಲಕ ಕಿ.ಮೀಗಟ್ಟಲೇ ದೂರ ಹೋಗಿ ಮಹಿಳೆಯರು ನೀರು ತರುತ್ತಾರೆ. ಜಿಲ್ಲಾಡಳಿತ ನೀರಿನ ಅಭಾವ ತಪ್ಪಿಸಲು ಹಲವು ಕ್ರಮ ಕೈಗೊಂಡರೂ ಶಾಶ್ವತ ಪರಿಹಾರ ಸಿಕ್ಕಿಲ್ಲ.

ನೀರಿನ ಕೊರತೆಗೆಯಾಗದಂತೆ ಜಿಲ್ಲಾಡಳಿತ ಕ್ರಮ:
ಕಳೆದ ವರ್ಷ 130ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಲವಾರು ಯೋಜನೆಗಳಡಿಯಲ್ಲಿ 42ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ, ಹಿಂದಿಗಿಂತ ಈ ವರ್ಷ ಸಂಖ್ಯಾ ಪ್ರಮಾಣ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೂ, 75-80 ಗ್ರಾಮಗಳಿಗೆ ನೀರಿನ ಅಭಾವ ಎದುರಾಗುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಫೆಬ್ರವರಿ ಕೊನೆಯ ವಾರದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದ್ದು, ಕುಡಿಯುವ ನೀರಿಗೆ ತತ್ವಾರ ಎದುರಾಗದೇ ಇರಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
‘ಜಿಲ್ಲೆಯಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಕೂಡಲೇ ಪರ್ಯಾಯ ಕ್ರಮ ಕೈಗೊಳ್ಳಬೇಕು. ಟ್ಯಾಂಕ್, ಕೆರೆಗಳು ದುರಸ್ತಿ ಹಂತದಲ್ಲಿದ್ದರೆ ಶೀಘ್ರವಾಗಿ ಸರಿಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಹಳ್ಳಿಗಳಲ್ಲಿ ಕೊಳವೆಬಾವಿಗಳನ್ನು ಗುರುತು ಮಾಡಲು ಸೂಚಿಸಲಾಯಿತು.
ನಗರ, ಪಟ್ಟಣಗಳಲ್ಲಿ ನೀರಿನ ಅಭಾವ:
ನಗರ ಪ್ರದೇಶಗಳಲ್ಲಿ ಯಾವುದೇ ಕಾಲೊನಿಯಲ್ಲಿ ನೀರಿನ ಸೋರಿಕೆ ಆಗುತ್ತಿದ್ದರೆ ತಡೆಯಬೇಕು, ಆರ್‌ಒ ಘಟಕಗಳನ್ನು ಸುಸ್ಥಿತಿಯಲ್ಲಿಡಬೇಕು. ನೀರನ ಟ್ಯಾಂಕರ್‌ಗಳನ್ನು ಒದಗಿಸಬೇಕು ಎಂದು ನಗರ ಅಭಿವೃದ್ದಿ ಕೋಶಕ್ಕೆ ತಿಳಿಸಲಾಗಿದೆ.

ಅಂತರ್ಜಲ ಕುಸಿತ; ನದಿಗಳಲ್ಲೇ ಕೊಳವೆಬಾವಿ ಕೊರೆತ:
ಬೇಸಿಗೆ ಕಾವು ನೆತ್ತಿ ಸುಡುತ್ತಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಬಳ್ಳಾರಿ ಜಿಲ್ಲೆಗೆ ಬೇಸಿಗೆ ಕಾಲವೇ ಒಂದು ಶಾಪವಾಗಿದೆ ಎನ್ನಬಹುದು. ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಬೇಸತ್ತ ಜನ ಬೇರೆ ದಾರಿ ಇಲ್ಲದೆ ನದಿಗಳಲ್ಲಿಯೇ ಬೋರ್‌ವೆಲ್ ಕೊರೆಯುತ್ತಿದ್ದಾರೆ.
ಸಿರಗುಪ್ಪ ತಾಲೂಕಿನ ಬಲಕುಂದಿ, ಮುದೇನುರು, ಉಪ್ಪಾರಹೊಸಳಿ, ಪಪ್ಪನಾಳ ಹಿರೇನಾಳ, ಅರಳಿಗ ಹಾಗೂ ಬಳ್ಳಾರಿಯ ರೂಪನಗುಡಿ, ಕಮ್ಮರಚೇಡ್ ಮುಂತಾದ ಗ್ರಾಮಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ಸಾವಿರಾರು ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ.
ಹಾಗಾಗಿ ವೇದಾವತಿ ನದಿಯಲ್ಲಿ ಕೊಳವೆಬಾವಿ ಕೊರೆದು ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ನದಿಯಲ್ಲಿ ಕೊರೆದ ಬೋರ್‌ವೆಲ್‌ನಲ್ಲಿ 2-2.1/2 ಇಂಚು ನೀರಿದೆ. ಇದು ಯಾವಾಗ ಬತ್ತಿ ಹೋಗುತ್ತದೆಯೋ? ಎಂಬ ಆತಂಕ ಆ ಹಳ್ಳಿ ಜನರಲ್ಲಿ ಮನೆ ಮಾಡಿದೆ. ವೇದಾವತಿನದಿಯಿಂದ ನೀರೆತ್ತಲು ಸಾಲು ಸಾಲು ಪೈಪ್ ಹಾಕಲಾಗಿದೆ. ನದಿಯ ನೀರು ನಂಬಿ ರೈತರು ಭತ್ತ, ಮೆಕ್ಕೆಜೋಳ ಬೆಳೆದಿದ್ದಾರೆ. ನದಿಯ ನೀರು ಖಾಲಿಯಾದರೆ ಮುಂದೇನು? ಎಂಬುದು ರೈತರ ಚಿಂತೆಗೆ ಕಾರಣವಾಗಿದೆ.
ನೀರು ಮಾರಾಟ:

ಜಿಲ್ಲೆಗೆ ಆವರಿಸಿರುವ ಬರಗಾಲ ಹಾಗೂ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲ ಗ್ರಾಮಗಳಿಂದ ಖಾಸಗಿ ಶುದ್ಧೀಕರಿಸಿದ ಘಟಕಗಳಿಂದ ನೀರು ತಂದು ಇಲ್ಲಿ ಮಾರಾಟ ಮಾಡುತ್ತಿರುವು ಕಂಡುಬರುತ್ತಿದೆ. ಅನಿವಾರ್ಯವಾಗಿ ಒಂದು ಬಿಂದಿಗೆ ನೀರಿಗೆ ಹತ್ತು ರೂಪಾಯಿ ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ. ಆಂಧ್ರ ಗಡಿಭಾಗದಲ್ಲಿರುವ ಕುಟುಂಬಗಳು ಕುಡಿಯುವ ನೀರಿಗಾಗಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡುವ ಅನಿವಾರ್ಯತೆ ಒದಗಿದೆ.
ದಶಕದ ನಂತರ ಬರಗಾಲ
ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ತಾಪಮಾನ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಒಂದು ದಶಕದ ನಂತರ ಭೀಕರ ಬರಗಾಲ ಎದಿರಿಸುವಂತಾಗಿದ್ದು, ಕಳೆದ ಒಂದು ವರ್ಷದಿಂದ ಮಳೆಯ ಕೊರತೆಯಿಂದ ಬರಗಾಲದ ಕರಿನೆರಳು ಆವರಿಸಿದೆ. ಮಳೆಯಿಲ್ಲದೆ ಬೋರ್‌ವೆಲ್‌ಗಳು ಬತ್ತಿವೆ. ಕುಡಿಯುವ ನೀರಿನ ಕೆರೆಗಳೆಲ್ಲ ಖಾಲಿಯಾಗಿ ಬಣಗುಡುತ್ತಿವೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕುಡಿಯುವ ನೀರು ತರುವುದೇ ಜನರಿಗೆ ಒಂದು ಸವಾಲಾಗಿದೆ. ನೀರು ತರಲು ಎಲ್ಲಕಡೆಯೂ ಅಲೆದಾಟ ಶುರುವಾಗಿದೆ.
ಇದನ್ನೂ ಓದಿ: ಬಳ್ಳಾರಿ | ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ: ಶಾಸಕ ನಾರಾ ಭರತ್ ರೆಡ್ಡಿ
ರೂಪಗಡದ ರೈತ ಗವಿಸಿದ್ದಪ್ಪ ಈದಿನ ಡಾಟ್ ಕಾಮ್ನೊಂದಿಗೆ ಮಾತನಾಡಿ, “ಈ ವರ್ಷ ಬಿಸಿಲಿನ ತಾಪ ಅವಧಿಗೆ ಮುಂಚೆ ಹೆಚ್ಚಾಗೈತ್ರಿ ಮತ್ತು ಈ ವರ್ಷ ಮಳೆನೂ ಕಡಿಮಿ ಹಂಗಾಗಿ ಸಹಜವಾಗಿ ಹೊಳಿ ನೀರು ಕಡಿಮಿ ಆಗೈತಿ, ಬೋರ್‌ನಾಗಿನ ನೀರೂ ಬತ್ತಾವ್, ಹಿಂಗಾರಿ ಪೀಕಿಗೆ ನೀರಿನ ಕೊರತಿ ಕಾಡಾಕತೈತ್ರಿ. ಕುಡಿಯೋ ನೀರಿನ ಸಮಸ್ಯನೂ ಬಹಳ ಐತ್ರಿ ಅದ್ಕಾಗಿ ನದಿಯಾಗ ಬೋರ್ ಕೊರಿಸ್ಯಾರ್. ಹೊಲಕ್ಕೂ, ಜನಕ್ಕೂ, ದನಕ್ಕೂ ನೀರಬೇಕ್ರಿ. ಸರಕಾರದರು ನಮ್ಮ ಹಳ್ಳಿಕಡೆ ತಿರುಗಿ ನೋಡಿದ್ರ ನಮ್ಮ ಕಷ್ಟ ಪರಿಹಾರ ಅಕ್ಕತ್ರಿ” ಎಂದರು.
ತಂಪು ಪಾನೀಯಗಳು
ಬಿಸಿಲಿನ ಧಗೆಗೆ ಜನ ತತ್ತರಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಮನೆಯ ಹೊರಬರಲು ಆತಂಕ ಪಡುತ್ತಿದ್ದಾರೆ. ಬೆವರಿನಿಂದ ತೋಯ್ದು ನೆರಳಿಗಾಗಿ ಪರದಾಡುತ್ತಿದ್ದಾರೆ. ಅಲ್ಲಲ್ಲಿ ಲೆಕ್ಕವಿಲ್ಲದಷ್ಟು ಗೂಡಂಗಡಿ, ತ್ರಿಚಕ್ರವಾಹನದಲ್ಲಿ ಐಸ್‌ಕ್ರೀಮ್ ಮಾರಾಟ. ಕಲ್ಲಂಗಡಿ, ಕರಬೂಜ ಹೀಗೆ ಮುಂತಾದ ಜ್ಯೂಸ್ ವ್ಯಾಪಾರ ಜೋರಾಗಿ ನಡೆಯುತ್ತಿದೆ.
ಸಹಾಯವಾಣಿ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ಉಲ್ಬಣಿಸಿದೆ. ಜಿಲ್ಲಾಧಿಕಾರಿ ಕಚೇರಿ ʼ1077ʼ ಸಹಾಯವಾಣಿ ಅರಂಭಿಸಿದೆ. ಸಮಸ್ಯೆಗಳ ಕುರಿತು ವಿಳಾಸದೊಂದಿಗೆ ಹೆಸರು ನೊಂದಣಿ ಮಾಡಿಕೊಳ್ಳಬಹುದೆಂದು ಜಿಲ್ಲಾಡಳಿತ ತಿಳಿಸಿದೆ.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್