ಬಳ್ಳಾರಿ, ಚನ್ನರಾಯಪಟ್ಟಣ, ದೇವನಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಕಡೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ರೈತರಿಂದ ಬಲವಂತವಾಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಭೂ ಸ್ವಾಧೀನ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಸಂಯುಕ್ತ ಹೋರಾಟದ ಅಧ್ಯಕ್ಷ ಗೋಣಿಬಸಪ್ಪ ಬಂಗೇರ್ ಆಗ್ರಹಿಸಿದರು.
ಕೆಐಎಡಿಬಿ ಬಲವಂತದಿಂದ ರೈತರ ಭೂಮಿ ಸ್ವಾಧಿನಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಜೂನ್ 25ರಂದು ನಡೆಸಲಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
“ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರಿಂದ ಕೆಐಎಡಿಬಿ ಬಲವಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಅಧಿ ಸೂಚನೆಯನ್ನು ಹೊರಡಿಸಿರುತ್ತದೆ. ಇದನ್ನು ವಿರೋಧಿಸಿ ದೇವನಹಳ್ಳಿಯ ತಾಲೂಕು ಕಚೇರಿಯ ಎದುರು ರೈತ ಸಂಘಟನೆ, ದಲಿತ ಸಂಘಟನೆ, ಮಹಿಳಾ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಜೂನ್ 25ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಿಂದ ಸುಮಾರು 200 ಜನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪ್ರತಿಭಟನೆ, ಒತ್ತಡ ಹೆಚ್ಚಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದು ಮಾತುಕತೆ ನಡೆಸಿ ರೈತರ ಪರವಾಗಿ ಮಾತನಾಡಿ ಅವರ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ನಂತರ ಅವರು ರೈತರ ಯಾವುದೇ ಸಮಸ್ಯೆಗೆ ಕಿವಿಗೊಡದೆ ಮರೆಯಾಗುತ್ತಿದ್ದಾರೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಬಲವಾಗಿ ಖಂಡಿಸುತ್ತದೆ. ಕೆಐಎಡಿಬಿ ಬಲವಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯಪ್ರವೇಶಿಸಿ ಕೂಡಲೇ ನಿಲ್ಲಿಸಬೇಕು. ರಾಜ್ಯ ಸರ್ಕಾರ ಮತ್ತು ಕೆಐಎಡಿಬಿ ಹೀಗೆ ಹಠಮಾರಿ ಧೋರಣೆ ತಳೆದಲ್ಲಿ ಹೊಸಪೇಟೆ ಹತ್ತಿರದ ಡಣಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ಜೂ.25ರೊಳಗೆ ತುಂಗಭದ್ರಾ ಜಲಾಶಯದ ಮೂರೂ ಕಾಲುವೆಗಳಿಗೆ ನೀರು ಬಿಡಿ: ಕರೂರ್ ಮಾಧವ ರೆಡ್ಡಿ
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಎಂ ಎಲ್ ಕೆಕೆ ನಾಯ್ಡು, ಪ್ರಧಾನ ಕಾರ್ಯದರ್ಶಿ ನಾಗರಾಜ್ ಜಾಲಿಹಾಳ್, ಉಪಾಧ್ಯಕ್ಷ ವಿರೂಪಾಕ್ಷ ಬನ್ನಿಹಟ್ಟಿ ದಿವಾಕರ್, ಸಂಡೂರು ತಾಲೂಕ ಅಧ್ಯಕ್ಷ ಚಂದ್ರಶೇಖರ್, ಸಿರುಗುಪ್ಪ ತಾಲೂಕ ಅಧ್ಯಕ್ಷ ಜಿ ಸಿದ್ದರಾಮಯ್ಯನವರ ಎಚ್ ಕಾಡಪ್ಪ ಹಾಗೂ ರೈತ ಮುಖಂಡರುಗಳು ಉಪಸ್ಥಿತರಿದ್ದರು.