ತುಂಗಭದ್ರಾ ಬಲದಂಡೆ ಕಾಲುವೆಗೆ ಕನಿಷ್ಠ 20 ದಿವಸದವರೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಎಐಕೆಕೆಎಂಸ್ ರೈತ ಸಂಘಟನೆ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬಳ್ಳಾರಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ಮಾತನಾಡಿ, “ಬಳ್ಳಾರಿ ಭಾಗದ ರೈತರು ಜೋಳ, ಮೆಕ್ಕೆಜೋಳ, ಸಜ್ಜೆ, ಹಲಸಂದೆ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆ ಬೆಳೆಯುತ್ತಿದ್ದಾರೆ. ಇವರಿಗೆ ಈ ಬೆಳೆಗಳು ಕೈಸೇರಲು ಇನ್ನೂ ಸುಮಾರು 20 ದಿನಗಳವರೆಗೆ ನೀರಿನ ಅವಶ್ಯಕತೆಯಿದೆ. ಹಾಗಾಗಿ ರೈತರ ಹಿತದೃಷ್ಟಿಯಿಂದ ಈ ತಿಂಗಳ ಪೂರ್ತಿ ಎಚ್‌ಎಲ್‌ಸಿ ಕಾಲುವೆಗೆ ನೀರು ಹರಿಸಬೇಕು” ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದರು.
ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, “ಜನವರಿ 20ರವರೆಗೂ ರೈತರ ಜಮೀನುಗಳಿಗಳಿಗೆ ನೀರು ಬೇಕಾಗಿದೆ. ಒಂದು ವೇಳೆ ನೀರಿನ ಕೊರತೆಯಾದರೆ, ಬೆಳೆದ ಬೆಳೆ ಕೈಗೆ ಸಿಗದೆ ಹಾಳಾಗುತ್ತದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆʼ. ಈಗಾಗಲೇ ಮೆಣಸಿನಕಾಯಿ ಬೆಳೆಯಲ್ಲಿ ಸಾಕಷ್ಟು ನಷ್ಟದಿಂದ ಸೋತಿದ್ದಾರೆ. ಈಗ ಬರುವ ಬೆಳೆಯಲ್ಲಿಯೂ ನಷ್ಟವಾದರೆ ರೈತರು ಗುಳೆವು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಬೆಳೆ ಕಟಾವಿಗೆ ಬರುವವರೆಗೂ ನೀರು ಹರಿಸಬೇಕು” ಎಂದು ವಿನಂತಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ರನ್ನ ವೈಭವಕ್ಕೆ ಒಂದು ಕೋಟಿ ಅನುದಾನ: ಸಚಿವ ತಿಮ್ಮಾಪೂರ
ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರೈತರಾದ ಈಶ್ವರ್ ಗೌಡ, ಬಸವರಾಜ್, ಗಾದಿಲಿಂಗ, ಓಂಕಾರ, ಸ್ವಾಮಿ, ಬಸವರಾಜ್, ತುಳಸಪ್ಪ ಸೇರಿದಂತೆ ಇತರರು ಇದ್ದರು.