ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿ ಜಾರ್ಖಂಡ್ ಮೂಲದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಬಾಲಕಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿ ಡಿವೈಎಫ್‌ಐನಿಂದ ಸಂಡೂರು ತಾಲೂಕು ತಹಶೀಲ್ದಾರ್ ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಮಾತನಾಡಿ, “ತೋರಣಗಲ್ಲು ಗ್ರಾಮದಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯ ಬಂಧನವೂ ಆಗಿದೆ. ಬಂಧಿತ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಅತ್ಯಾಚಾರವೆಸಗಿದ ಆರೋಪಿ ಕಮಾಲಾಪುರ ಮಂಜುನಾಥನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಇಲಾಖೆಗೆ ಸ್ವಾಗತರ್ಹ. ಅದೇ ರೀತಿ ಅತ್ಯಾಚಾರಿಗೆ ಕಠಿಣ ಶಿಕ್ಷೆ ನೀಡಬೇಕು” ಎಂದು ಆಗ್ರಹಿಸಿದರು.
“ಬಾಲಕಿಗೆ ಚಿಕಿತ್ಸೆಯ ಖರ್ಚು ವೆಚ್ಚ ಪರಿಗಣಿಸಿ ಸೂಕ್ತ ಪರಿಹಾರಕ್ಕೆ ಹಾಗೂ ಅಲ್ಲದೆ ಕುಟುಂಬ ನಿರ್ವಣೆಗೆ ₹25 ಲಕ್ಷ ಆರ್ಥಿಕ ನೆರವು ನೀಡಬೇಕು. ತೋರಣಗಲ್ಲು ವ್ಯಾಪ್ತಿಯ ಪ್ರದೇಶವು ಕೈಗಾರಿಕೆಗಳಿಂದ ಕೂಡಿರುವ ಪ್ರದೇಶವಾದುದರಿಂದ ಸಿ ಸಿ ಕ್ಯಾಮೆರಾ, ಸುರಕ್ಷತೆ ಫಲಕಗಳು ಸೇರಿದಂತೆ ಸಾಧನಗಳನ್ನು ಅಳವಡಿಸಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದರು.
“ಬಾಲಕಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಯಾವುದೇ ಆರೋಪಿಗಳಾಗಲಿ ಸುಪ್ರೀಂಕೋರ್ಟ್ ಕಾನೂನಾತ್ಮಕ ಗಲ್ಲುಶಿಕ್ಷೆ ಜಾರಿ ಮಾಡುವ ಮೂಲಕ ಅತ್ಯಾಚಾರಿಗಳಿಗೆ ತಕ್ಕ ಪಾಠವಾಗಬೇಕು. ಇದರಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ತ್ವರಿತವಾಗಿ ಗಲ್ಲುಶಿಕ್ಷೆ ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾ ಕ್ರಿಡಾ ಕಾರ್ಯದರ್ಶಿ ನಾಗಭೂಷಣ ಮಾತನಾಡಿ, “ಘಟನೆ ನಡೆದು 24 ದಿನಗಳು ಕಳೆದರೂ ಬಾಲಕಿ ಆಘಾತದಿಂದ ಚೇತರಿಸಿಕೊಂಡಿಲ್ಲ. ಭಯದ ವಾತವರಣದಲ್ಲಿ ಬಳಲುತ್ತಿದ್ದು, ಗುಣಮುಖವಾಗಲು 3 ತಿಂಗಳ ಕಾಲಾವಕಾಶ ಬೇಕಾಗುತ್ತದೆಂದು ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರು ದುಃಖದಿಂದ ಆತಂಕಕೊಳಗಾಗಿದ್ದು, ಅವರಿಗೆ ಬದುಕಲು ಬಾಡಿಗೆ ಮನೆಯ ಒಂದು ರೂಮ್ ಬಿಟ್ಟರೆ ಜೀವನ ನಡೆಸಲು ಆದಾಯವಿಲ್ಲದೇ ವಾಸ ಮಾಡಲು ಕಷ್ಟಕರವಾಗಿದೆ. ಆದ್ದರಿಂದ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪರಶುರಾಂಪುರ ತಾಲೂಕು ಕೇಂದ್ರಕ್ಕಾಗಿ ಫೆ.10ಕ್ಕೆ ಚಳುವಳಿ; ಅಖಂಡ ಕರ್ನಾಟಕ ರೈತ ಸಂಘ
ಮನವಿ ಪತ್ರ ಸ್ವೀಕರಸಿ ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, “ಈಗಾಗಲೇ ಆ ಬಾಲಕಿ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಸಂತ್ರಸ್ತ ಮಗುವಿಗ ಶೈಕ್ಷಣಿಕ ಅನುಕೂಲ ಮಾಡುತ್ತೇವೆ. ಕುಟುಂಬಕ್ಕೆ ₹25 ಲಕ್ಷ ಆರ್ಥಿಕ ನೆರವಿನ ಕುರಿತು ಚರ್ಚೆ ಮಾಡಿ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರುತ್ತೇವೆ” ಎಂದು ಪ್ರತಿಕ್ರಿಯಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ಶರೀಫ್, ಜಿಲ್ಲಾ ಮುಖಂಡರು ಖಲಾಂದರ್ ಭಾಷಾ, ಬಾಲಕಿ ಪೋಷಕರು ಮತ್ತು ಸುನಿಲ್ ಚೌಧರಿ, ಶಂಭು ಚೌಧರಿ, ಬಬುಲ್ ಕುಮಾರ್, ಮನೋಜ್ ಕುಮಾರ್, ತನು ಚೌಧರಿ ಸೇರಿದಂತೆ ಇತರರು ಇದ್ದರು.