ರಸ್ತೆ ಅಗಲೀಕರಣದ ಕಾರಣಕ್ಕೆ ಯಾವುದೇ ನೋಟಿಸ್ ನೀಡದೇ ಏಕಾಏಕಿ ಮನೆ ತೆರವಿಗೆ ಮುಂದಾದ ಲೋಕೋಪಯೋಗಿ ಇಲಾಖೆ ಕ್ರಮವನ್ನು ವಿರೋಧಿಸಿ ಬಳ್ಳಾರಿ ಜಿಲ್ಲೆ ಬಾದನಹಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಯಿತು.
ಇಲಾಖೆಯು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸದಿರುವುದು ಸರ್ವಾಧಿಕಾರದ ಧೋರಣೆಯಾಗಿದೆ. ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿಯವರು ಇದನ್ನು ಕಂಡು ಕಾಣದಂತಿರುವ ಜಾಣ ಕುರುಡುತನ ಅನುಸರಿಸುತ್ತಿದ್ದಾರೆ ಎಂದು ಜನ ಖಂಡಿಸಿದರು.
ಗ್ರಾಮದ ಮಧ್ಯ ಭಾಗದಲ್ಲಿ ರಾಜ್ಯ ಹೆದ್ದಾರಿ ನಿರ್ಮಿಸುವುದರಿಂದ ಸಾಕಷ್ಟು ಅಪಘಾತಗಳು, ಅನಾಹುತಗಳು ಸಂಭವಿಸಬಹುದು. ಹಾಗಾಗಿ ಜನನಿಬಿಡ ಪ್ರದೇಶದಲ್ಲಿ ಹೆದ್ದಾರಿಗಳನ್ನು ನಿರ್ಮಿಸುವುದು ಸೂಕ್ತ ಎಂದರು. ಇದನ್ನು ಬಿಟ್ಟು ಜನರ ಜೀವನ ನಾಶ ಮಾಡಿ ರಸ್ತೆ ನಿರ್ಮಿಸಲು ಮುಂದಾದಲ್ಲಿ ತೀವ್ರ ಸ್ವರೂಪದ ಹೋರಾಟ ಕಟ್ಟುವುದು ನಿಚ್ಚಿತ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಇದನ್ನೂ ಓದಿ: ಬಳ್ಳಾರಿ | ಜು.12ರಂದು ರಾಷ್ಟ್ರೀಯ ‘ಲೋಕ ಅದಾಲತ್’
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಎಐಡಿವೈಓ ಯುವಜನ ಸಂಘಟನೆ ಜಿಲ್ಲಾಧ್ಯಕ್ಷ ಕೊಳೂರು ಪಂಪಾಪತಿ, ಅಂಬರೀಶ, ಶೇಕಣ್ಣ, ಹನುಮಕ್ಕ, ದುರುಗಣ್ಣ, ಗೋವಿಂದ್, ಜಡೆಪ್ಪ ಹಾಗೂ ಇತರಿದ್ದರು.