ಜಾಗತಿಕ ಸಂಸ್ಕೃತಿಗೆ ವಿಶ್ವ ಮಾನವ ಸಂದೇಶವನ್ನು ಕನ್ನಡ ಸಾಹಿತ್ಯ ನೀಡಿದೆ ಎಂದು ತೋರಣಗಲ್ಲು ವಿಭಾಗದ ಉಪ ಪೊಲೀಸ್ ಅಧೀಕ್ಷಕ ಪ್ರಸಾದ್ ಕೆ ಗೋಖಲೆ ಅವರು ತಿಳಿಸಿದರು.
ನಗರದ ವೀರಶೈವ ಮಹಾವಿದ್ಯಾಲಯದ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನಡೆದ ಲಿಂ. ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ದತ್ತಿ , ಲಿಂ ಕೋಳೂರು ಪೊಂಪನಗೌಡ ಮತ್ತು ಕೋಳೂರು ನೀಲಮ್ಮ ದತ್ತಿ, ಲಿಂ. ಜಾನೇಕುಂಟೆ ಸಿದ್ಧಬಸಪ್ಪ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಜಾಗತೀಕರಣದ ಸಂದರ್ಭದಲ್ಲಿ ದೇಶೀಯ ಭಾಷೆಗಳ ಬೆಳವಣಿಗೆಗೆ ಆತಂಕ ಉಂಟಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ವ್ಯಕ್ತಿತ್ವವನ್ನು ಸಾಬೀತು ಪಡಿಸಲು ನಿರಂತರವಾಗಿ ಅಧ್ಯಯನಶೀಲರಾಗಬೇಕು” ಎಂದು ಕರೆ ನೀಡಿದರು.
ಕುರುಗೋಡು ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶಶಿಕಾಂತ, “ಕನ್ನಡ ಸಾಹಿತ್ಯದಲ್ಲಿ ನೈತಿಕ ಶಿಕ್ಷಣದ ಮೌಲ್ಯಗಳು” ಎನ್ನುವ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ಚೀಲದಲ್ಲೇ ಮೊಳಕೆಯೊಡೆದ ಜೋಳ; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಕಾರ್ಯಕ್ರಮದಲ್ಲಿ ವೀರಶೈವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ, ಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಿ ಬಸವರಾಜ, ವೀರಶೈವ ಕಾಲೇಜಿನ ಪ್ರಾಂಶುಪಾಲ ಜಿ ಮಲ್ಲನಗೌಡ, ಡಾ ನೀಲಮ್ಮ, ಡಾ. ಶಾಮೂರ್ತಿ, ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕಸಾಪ ಗ್ರಾಮೀಣ ಅಧ್ಯಕ್ಷ ಎ ಯರ್ರಿಸ್ವಾಮಿ ಹಾಗೂ ಇತರರಿದ್ದರು.