ಕಳೆದ ವರ್ಷ ಕಟಾವು ಮಾಡಿರುವ ಜೋಳ ರೈತರ ಮನೆ ಮುಂದೆ ಒಣಗುತ್ತಿದೆ. ಕೂಡಲೇ ಹಿಂಗಾರು ಜೋಳ ಖರೀದಿಸಲು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕನ್ನಡ ನಾಡು ರೈತ ಸಂಘ ಬಳ್ಳಾರಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ ಈಶ್ವರಪ್ಪ ಮೆಣಸಿನ ಮಾತನಾಡಿ, “ಜೋಳ, ಬಳ್ಳಾರಿ ಜಿಲ್ಲಾ ಹಾಗೂ ತಾಲೂಕಿನ ಪ್ರಮುಖ ಬೆಳೆಯಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕಟಾವು ಮಾಡಿರುವ ಕ್ವಿಂಟಲ್‌ಗಟ್ಟಲೆ ಜೋಳವನ್ನು ರೈತರು ಮನೆ ಮುಂದೆ ಹಾಕಿಕೊಂಡಿದ್ದಾರೆ. ಅಲ್ಲದೇ, ಮುಂಗಾರು ಬೆಳೆ ಪ್ರಾರಂಭಗೊಂಡಲ್ಲಿ ಬೆಳೆಯು ಸಂಪೂರ್ಣ ನಾಶವಾಗುತ್ತದೆ. ಸಾಲ ಮಾಡಿ ಬೆಳೆದಿರುವ ಒಂದೇ ಬೇಳೆ ಹೀಗೆ ನೀರು ಪಾಲಾದರೆ ರೈತರ ನೋವು ಕೇಳುವವರಾರು? ಆದರೆ, ಇನ್ನೂ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಜೋಳದ ನೋಂದಣಿ ಮಾಡುವ ಕೆಲಸವೂ ನಡೆದಿಲ್ಲ. ಆದ್ದರಿಂದ, ಜೋಳವನ್ನು ಗೋದಾಮಿಗೆ ತೆಗೆದುಕೊಳ್ಳಬೇಕು” ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಜಿ.ಭಾಸ್ಕರ್ ರೆಡ್ಡಿ, “ಮಾರ್ಚ್ 10ರಿಂದ 24ರವರೆಗೆ ಸುಮಾರು 150 ರೈತರು 10,000 ಕ್ವಿಂಟಲ್ ಜೋಳವನ್ನು ತೂಕ ಹಾಕಿರುತ್ತಾರೆ. ಇನ್ನುಳಿದ 935 ರೈತರು ಇನ್ನು 90,000 ಕ್ವಿಂಟಲ್ ಜೋಳವನ್ನು ತರಲಿದ್ದಾರೆ. ಆದ್ದರಿಂದ, ಆದಷ್ಟು ಬೇಗನೇ ಜೋಳವನ್ನು ತೂಕ ಮಾಡಿ ಲಾರಿಗಳಲ್ಲಿ ಲೋಡ್ ಮಾಡಿಸಬೇಕು. ಜಿ.ಪಿ.ಎಸ್. ಗಾಡಿಗಳು 3-4 ಲಾರಿಗಳು ಬಂದರೆ ಜೋಳವನ್ನು ಖರೀದಿ ಮಾಡಲು ವಿಳಂಬವಾಗುತ್ತದೆ. ಈಗಾಗಲೇ ಜೋಳ ಕಟಾವು ಆಗಿ 3 ತಿಂಗಳುಗಳು ಮೇಲೆ ಆಗಿದೆ. ಇನ್ನೂ ಬಿಟ್ಟರೆ ಜೋಳಕ್ಕೆ ಹುಳು ಬೀಳುವ ಸಾಧ್ಯತೆ ಇರುತ್ತದೆ. ನಂತರ ಸಂಕಷ್ಟಕ್ಕೀಡಾದ ರೈತ ಆತ್ಮಹತ್ಯೆ ಹಾದಿ ಹಿಡಿಯುತ್ತಾನೆ. ಅದರ ನೇರ ಹೊಣೆ ಸರ್ಕಾರದ್ದೇ ಆಗಿರುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ಸರ್ಕಾರಿ ಆದರ್ಶ ವಿದ್ಯಾಲಯದ ಪ್ರವೇಶ ಪತ್ರ ಪ್ರಕಟ
ಪಿ.ಮಂಜುನಾಥ, ಈರಣ್ಣ .ಬಿ, ಎಸ್,. ಚಂದ್ರಣ್ಣ, ಎನ್.ನಾಗೇಂದ್ರ, ಗಡಿಗೆ ರುದ್ರಗೌಡ, ಶಿವಮೂರ್ತಿ ಕಣ್ಣಿ, ಎಲ್.ಮಂಜುನಾಥಗೌಡ, ಆರ್.ಪ್ರದೀಪ್, ರುದ್ರಪ್ಪ, ಶಿವಶಂಕರಪ್ಪ, ಎನ್.ವಿಶ್ವನಾಥ, ಎಂ.ಎರ್ರಿಸ್ವಾಮಿ, ಚಂದ್ರಾರೆಡ್ಡಿ, ಗೋವಿಂದಪ್ಪ, ಪಿ.ಮನೋಜ್ ಕುಮಾರ್ ಹಾಗೂ ಇತರರಿದ್ದರು.