ಕೊಟ್ಟೂರು ತಾಲೂಕು ವ್ಯಾಪ್ತಿಯಲ್ಲಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರವನ್ನು ಸಕಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಕ್ಷೇತ್ರದ ಶಾಸಕ ಡಾ ಶ್ರೀನಿವಾಸ್ ಎನ್ ಟಿ ಭರವಸೆ ನೀಡಿದರು.
ತಾಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ, ತೂಲಹಳ್ಳಿ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಕಟ್ಟಡ, ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ, ಹುಣಸೆಕಟ್ಟೆ ಗ್ರಾಮದಲ್ಲಿ ಶಾಲಾ ಕೊಠಡಿ, ಹಾರಕನಾಳು, ನಡುಮಾವಿನಹಳ್ಳಿ ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಅಂದಾಜು ₹10 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ʼಕ್ಷೇತ್ರ ವ್ಯಾಪ್ತಿಯಲ್ಲಿನ ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಅಂತಹ ಹಳ್ಳಿಗಳನ್ನು ಗುರುತಿಸಿ ಅಗತ್ಯ ಇರುವೆಡೆ ಮೂಲಭೂತ ಸೌಕರ್ಯ ಕಲ್ಪಿಸಿ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತೇನೆ. ಕ್ಷೇತ್ರದ ಜನರ ಆರೋಗ್ಯ, ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇನೆʼ ಎಂದರು.
ʼಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿಯುವುದರ ಜೊತೆಗೆ ಸಾರ್ವಜನಿಕರಿಂದಲೂ ಕುಂದು ಕೊರತೆ ಆಲಿಸುತ್ತಿರುವೆ. ಜನತೆ ಸಲ್ಲಿಸುವ ಮನವಿಗಳನ್ನು ಪರಿಶೀಲಿಸಿ ಆಯಾ ಇಲಾಖೆ ಮೂಲಕ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದು ಕ್ಷೇತ್ರದಾದ್ಯಂತ 50 ಸರ್ಕಾರಿ ಶಾಲೆಗಳಿಗೆ ನೂರು ಕೊಠಡಿಗಳ ದುರಸ್ತಿ ಹಾಗೂ ಉನ್ನತೀಕರಣಗೊಳಿಸಲು ಮುಂದಾಗಿರುವೆʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ₹6 ಕೋಟಿ ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದಲ್ಲಿ ಹುಳು ಪತ್ತೆ; ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ
ಈ ವೇಳೆ ಕೂಡ್ಲಿಗಿ ತಹಸೀಲ್ದಾರ್ ಜಿ ಕೆ ಅಮರೇಶ್, ಮುಖಂಡರಾದ ಜಿ. ಗುರುಸಿದ್ದನಗೌಡ, ಸಾವಜ್ಜಿ ರಾಜೇಂದ್ರ ಪ್ರಸಾದ, ಕೆ ಎಂ ಶಶಿಧರ್, ವಿವಿಧ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.
