ಹೊಸ ದರೋಜಿ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಕಾರ್ಮಿಕರಿಗೆ ಕಳೆದ ಎರಡು ವರ್ಷಗಳಿಂದ ಕೂಲಿ ನೀಡಿಲ್ಲ ಎಂದು ಕಾರ್ಮಿಕರಾದ ಶಾಂತಮ್ಮ ಆರೋಪಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಮೇಟಿಗಳಿಗೆ ಕೂಲಿಯನ್ನು ನೀಡದ ಕಾರಣ ಗ್ರಾಮ ಇಪ್ಪತ್ತಕ್ಕೂ ಹೆಚ್ಚು ಮೇಟಿಗಳೊಂದಿಗೆ ಜಿಲ್ಲಾ ಪಂಚಾಯತ್ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಮನರೇಗಾ ಯೋಜನೆಯಲ್ಲಿ ಕೆಳಸ ಮಾಡಿದ ಮೇಟಿಗಳಿಗೆ ಕಳೆದ ಎರಡು ವರ್ಷಗಳಿಂದ ಪಿಡಿಒ ಪ್ರಭುಲಿಂಗನಗೌಡ ಕೂಲಿ ನೀಡಿಲ್ಲ. ಇದರಿಂದ ನಮ್ಮ ಜೀವನ ದುಸ್ತರವಾಗಿದೆ. ಆದಷ್ಟು ಶೀಘ್ರದಲ್ಲಿ ನಮ್ಮ ಕೂಲಿಯನ್ನು ಬಿಡುಗಡೆ ಮಾಡಬೇಕು. ನಮ್ಮ ಕೂಲಿಯನ್ನು ನೀಡುವಂತೆ ಹಲವಾರು ಬಾರಿ ಒತ್ತಾಯಿಸಿದರೂ ಕೂಡ ಅವರು ಕಿವುಡರಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.

“ಮೇಟಿಗಳಿಗೆ ತಮ್ಮ ಕುಟುಂಬದ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದಷ್ಟು ಶೀಘ್ರದಲ್ಲಿ ಸಿಎಸ್ ಅವರು ಮೇಟಿಗಳ ಕೂಲಿಯನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ನಾವು ಹಲವಾರು ಜನ ಮನರೇಗಾ ಕೂಲಿಕಾರರನ್ನು ಕರೆದುಕೊಂಡು ಕೂಲಿ ಕೆಲಸವನ್ನು ಮಾಡಿಸಿದರೂ ಕೂಡ ಪಿಡಿಒ, ಜೆಇ ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್ ಅವರು ನಮ್ಮಿಂದ ಕಮಿಷನ್ ಕೇಳುತ್ತಿದ್ದಾರೆ. ಕಮಿಷನ್ ಕೊಡಲು ಒಪ್ಪದೇ ಇದ್ದಾಗ ಹೀಗೆ ನಮ್ಮನ್ನು ವರ್ಷಾನುಗಟ್ಟಲೆ ನಮ್ಮ ಕೂಲಿಯನ್ನು ನೀಡದೇ ಸತಾಯಿಸುತ್ತಿದ್ದಾರೆ. ಹೊಸ ದರೋಜಿ ಪಿಡಿಒ ಪ್ರಭುಲಿಂಗನಗೌಡ, ಎ.ಡಿ ರೇಣುಕಾರಾಧ್ಯ, ಜೆಇ ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್ ವಿರುದ್ಧ ಕ್ರಮ ಕೈಗೊಂಡು ನಮ್ಮ ಕೂಲಿಯನ್ನು ಬಿಡುಗಡೆಗೊಳಿಸಿ ಕೊಡಬೇಕು” ಎಂದು ಶಾಂತಮ್ಮ ಒತ್ತಾಯಿಸಿದರು.
“ಮನರೇಗಾ ಕಾರ್ಮಿಕರಿಗೆ ಕೇವಲ ₹70ರಿಂದ ₹100ವರೆಗೆ ಮಾತ್ರ ಕೂಲಿ ನೀಡುತ್ತಿದ್ದಾರೆ. ಇನ್ನುಳಿದ ಹಣವನ್ನು ಅಧಿಕಾರಿಗಳು ಗುಳುಂ ಮಾಡುತ್ತಿದ್ದಾರೆ. ಎಲ್ಲ ಅಧಿಕಾರಿಗಳಿಗೆ ಸಮಾನವಾಗಿ ಕಮಿಷನ್ ಸಂದಾಯವಾದಲ್ಲಿ ಮನರೇಗಾ ಕೆಲಸವನ್ನು ಸುಸೂತ್ರವಾಗಿ ನಡೆಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಕೇವಲ ₹60 ರಿಂದ ₹100 ಕೂಲಿ ಹಣವನ್ನು ಸಂದಾಯ ಮಾಡುತ್ತಾರೆ. ಕಳೆದ ಮೂರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಟ್ರಂಚ್ ವರ್ಕ್ ಮಾಡುತ್ತಿದ್ದಾರೆ. ಈ ಕಾಮಗಾರಿಯಲ್ಲಿ ಕೇವಲ ಅರ್ಧ ಅಡಿ ಮತ್ತು ಮುಕ್ಕಾಲು ಅಡಿಗಳಷ್ಟು ಮಾತ್ರ ಕೆಲಸ ನಡೆಯುತ್ತಿದ್ದು, ಈ ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
“ನಮಗೆ ಕಳೆದ ಎರಡು ವರ್ಷಗಳಿಂದ ಬರಬೇಕಾದ ಬಾಕಿ ಕೂಲಿಯನ್ನು ಬಿಡುಗಡೆಗೊಳಿಸಬೇಕು. ಮನರೇಗಾ ಕೂಲಿ ಕಾರ್ಮಿಕರಿಗೆ ಪ್ರತಿದಿನ ₹370ಗಳ ಕೂಲಿಯನ್ನು ಅವರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಹಲವಾರು ಮೇಟಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮನರೇಗಾ ಕೂಲಿ ಕಾರ್ಮಿಕರು ಸೇರಿದಂತೆ ಇತರರು ಇದ್ದರು.