ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೀಡುತ್ತಿದ್ದ ಕೂಲಿಯನ್ನು ಏ.1 ರಿಂದ ₹370ಕ್ಕೆ ಹೆಚ್ಚಳ ಮಾಡಲಾಗಿದ್ದು, ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದರು.
ಮನರೇಗಾ ಯೋಜನೆಯಡಿ ಪ್ರಸ್ತುತ ವರ್ಷದಲ್ಲಿ ₹349 ಕೂಲಿ ನೀಡುತ್ತಿದ್ದು, ಅದನ್ನು ಪರಿಷ್ಕರಿಸಿ 2025-26ನೇ ಸಾಲಿನ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಪಾವತಿಸಲು ಕ್ರಮವಹಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಜನರು ವಲಸೆ ಹೋಗುವುದನ್ನು ತಪ್ಪಿಸಿ ಗ್ರಾಮದ ಬಡ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ, ತಮ್ಮ ಗ್ರಾಮದಲ್ಲೇ 100 ದಿನಗಳವರೆಗೆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದರು.
ಈ ಯೋಜನೆಯಡಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ದಿನ ಒಂದಕ್ಕೆ ನಿಗದಿತ ಕೂಲಿ ಪಡೆಯಲು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯತಿ ಇರುತ್ತದೆ. ಶೇ.60 ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10 ರಷ್ಟು ರಿಯಾಯತಿ ನೀಡಲಾಗುತ್ತದೆ.
ಮನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ 06 ತಿಂಗಳ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 06 ತಿಂಗಳವರೆಗೆ ಯೋಜನೆಯಡಿ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ರಿಯಾಯತಿ ಪಡೆಯಲು ಆರೋಗ್ಯ ಇಲಾಖೆಯು ನೀಡುವ ತಾಯಿ ಕಾರ್ಡ್‌ನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಬಳ್ಳಾರಿ | ಸರ್ಕಾರಿ ಆದರ್ಶ ವಿದ್ಯಾಲಯದ ಪ್ರವೇಶ ಪತ್ರ ಪ್ರಕಟ
18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸುವುದು. ಅರ್ಜಿ ಜೊತೆಗೆ ಪಾಸ್‌ಪೋರ್ಟ್ ಅಳತೆಯ ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯತಿಗೆ ನೀಡಿ, ಉದ್ಯೋಗ ಚೀಟಿಯನ್ನು ಪಡೆದುಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.