ಮಹಿಳೆಯೊಬ್ಬರು ತನ್ನ ಮಗಳಿಗೆ ಮುತ್ತು ಕಟ್ಟಿಸಿ, ದೇವದಾಸಿ ಎಂಬ ಅನಿಷ್ಠ ಪದ್ದತಿಗೆ ದೂಡಲು ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಕರುಗೋಡು ಎಂಬಲ್ಲಿ ನಡೆದಿದೆ. ಯುವತಿಯನ್ನು ಪೊಲೀಸರು ರಕ್ಷಿಸಿದ್ದು, ಆಕೆಗೆ ಆಕೆಯ ಪ್ರತಿಕರನೊಂದಿಗೆ ಮದುವೆ ಮಾಡಿಸಿದ್ದಾರೆ.
ಯುವತಿ ತಾನು ಪ್ರೀತಿಸುತ್ತಿದ್ದ ಯವಕನೊಂದಿಗೆ ವಿವಾಹವಾಗುವುದಾಗಿ ತನ್ನ ತಾಯಿಯ ಬಳಿ ಪ್ರಸ್ತಾಪಿಸಿದ್ದರು. ಯುವತಿಯ ಪ್ರೀತಿಯನ್ನು ವಿರೋಧಿಸಿದ ತಾಯಿ, ಆಕೆಯನ್ನು ದೇವದಾಸಿ ಪದ್ದತಿಗೆ ದೂಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ
ತಾಯಿಯ ಧೋರಣೆಯಿಂದ ಆತಂಕಗೊಂಡ ಯುವತಿ ‘ದೇವದಾಸಿ ವಿಮೋಚನಾ ಸಂಘಟನೆ’ಯನ್ನು ಸಂಪರ್ಕಿಸಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಕುರುಗೋಡು ಠಾಣೆಯ ಪಿಎಸ್‌ಐ ಸುಪ್ರಿತ್ ಅವರು ಯುವತಿಯ ಮನೆಗೆ ತೆರಳಿ, ಆಕೆಯನ್ನು ರಕ್ಷಿಸಿದ್ದಾರೆ. ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಸಿದ್ದಾರೆ.
ಗಮನಿಸಿ: ದೇವದಾಸಿ ಪದ್ದತಿ ಸಮಾಜದ ಅತ್ಯಂತ ಅನಿಷ್ಠ ಪದ್ದತಿ. ಹೆಣ್ಣು ಮಕ್ಕಳನ್ನು ದೇವದಾಸಿಯಾಗಿ ಮಾಡಿ ದೇವರ ಸೇವೆ ಸಲ್ಲಿಸುತ್ತೇವೆ ಎಂಬ ಮೌಡ್ಯ ಸಮಾಜದಲ್ಲಿ ಬೇರೂರಿದೆ. ಆದರೆ, ಅದು ದೇವರಿಗೆ ಸೇವೆ ಅಲ್ಲ. ಬದಲಾಗಿ, ಅವರ ಬದುಕು ನಾಶಮಾಡುವ ಶೋಷಣೆಯ ಪದ್ದತಿ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಭಾರತ ಸರ್ಕಾರವು 1988ರಲ್ಲಿಯೇ ದೇವದಾಸಿ ಪದ್ಧತಿಯನ್ನು ನಿಷೇಧಿಸಿದೆ.