ತಾಯ್ತನ ಎಂಬುದು ಹೆಣ್ಣು ಮಕ್ಕಳಿಗೆ ನೈಸರ್ಗಿಕವಾಗಿ ಸಿಕ್ಕಿರುವ ಕೊಡುಗೆಯಾಗಿದೆ. ಹೆಣ್ಣಿನ ಜೀವನದಲ್ಲಿ ತಾಯಿಯಾಗುವುದು ಅತ್ಯಂತ ಪ್ರಮುಖ ಘಟ್ಟ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ ಜೆ ಶೋಭಾರಾಣಿ ಅಭಿಪ್ರಾಯಪಟ್ಟರು.
ಸುಬ್ಬರಾವ್ ಆಸ್ಪತ್ರೆಯಲ್ಲಿ ನಡೆದ ಬಂಜೆತನ ನಿವಾರಣಾ ಸಮಾರಂಭದಲ್ಲಿ ಮಾತನಾಡಿದ ಅವರು, “ಬಂಜೆತನ ವಿವಾಹಿತ ಮಹಿಳೆಯರಲ್ಲಿ ಕೀಳರಮೆಯನ್ನು ಉಂಟುಮಾಡುತ್ತದೆ. ಹೆಣ್ಣು ಮಕ್ಕಳು ದೈಹಿಕವಾಗಿ ಸಬಲರಾಗಿದ್ದರೂ ಆರೋಗ್ಯ ಮತ್ತು ಸಂತಾನ ವಿಷಯದಲ್ಲಿ ಅನಾರೋಗ್ಯವಾಗಿದ್ದರೆ ಅಂಥವರಲ್ಲಿ ಸಂತಾನ ಆಗುವುದು ಕಷ್ಟ. ಇದು ಕೇವಲ ಹೆಣ್ಣಿನ ದೌರ್ಬಲ್ಯವಲ್ಲ, ಅದು ಗಂಡಿನದೂ ಸಮಸ್ಯೆ ಇರಬಹುದು. ಆದ್ದರಿಂದ ದಂಪತಿಗಳು ಇಬ್ಬರು ಚಿಕಿತ್ಸೆಗೆ ಮತ್ತು ತಪಾಸಣೆಗೆ ಒಳಪಟ್ಟಲ್ಲಿ ಅಂಥವರಿಗೆ ಬಂಜೆತನ ನಿವಾರಿಸಿ ಮಕ್ಕಳ ಸಂತಾನವನ್ನು ಹೊಂದಲು ಅನುಕೂಲವಾಗುತ್ತದೆ” ಎಂದು ತಿಳಿಸಿದರು.
“ಕೆಲ ಮಹಿಳೆಯರು ಹೆಣ್ಣು ಮಗುವಾದಲ್ಲಿ ಕೀಳರಿಮೆಗೆ ಒಳಗಾಗುತ್ತಾರೆ ಅಥವಾ ಅವರ ಕೌಟುಂಬಿಕ ಸದಸ್ಯರಿಂದ ಹೀಯಾಳಿಕೆಗೆ ಒಳಪಟ್ಟು ಹೆಣ್ಣು ಮಗು ಹೆರುವುದೇ ಒಂದು ಅಪರಾಧ ಎಂಬಂತೆ ಭಾವಿಸಿರುತ್ತಾರೆ. ಇದು ಸಮಾಜದಲ್ಲಿ ಅತ್ಯಂತ ತಪ್ಪು ಕಲ್ಪನೆಯಾಗಿದೆ. ಹೆಣ್ಣಾಗಲಿ ಗಂಡಾಗಲಿ ಇಬ್ಬರಿಗೂ ಸಮಾನವಾದ ಪ್ರಾಶಸ್ತ್ಯವನ್ನು ನೀಡಬೇಕು” ಎಂದರು.
ಎಸ್ ಆರ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ ಲಕ್ಷ್ಮಿ ಪಾವನಿ ಮಾತನಾಡಿ, “ಇಷ್ಟು ವರ್ಷಗಳಲ್ಲಿ ಸುಮಾರು 10 ಸಾವಿರ ಮಹಿಳೆಯರಿಗೆ ತಪಾಸಣೆ ಮಾಡಿ ಅವರ ಬಂಜೆತನದ ದೌರ್ಬಲ್ಯವನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿ, ಅವರು ಸಂತಾನ ಫಲವನ್ನು ಪಡೆಯುವಲ್ಲಿ ಯಶಸ್ವಿಯಾಗಿರುತ್ತೇವೆ. ನಮ್ಮ ಆಸ್ಪತ್ರೆಯಲ್ಲಿ ಪ್ರತಿ ಗುರುವಾರದಂದು ಬಂಜೆತನದ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ನಂತರದ ಚಿಕಿತ್ಸೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಹಿಳೆಯರಿಗೆ ಚಿಕಿತ್ಸೆಯನ್ನು ನೀಡಲಾಗುವುದು ಮತ್ತು ರೈತರಿಗೆ ರೈತ ಮಹಿಳೆಯರಿಗೆ ಅವರ ಪಹಣಿ ಪತ್ರಿಕೆ ದಾಖಲೆಯನ್ನು ತಂದಲ್ಲಿ ಚಿಕಿತ್ಸೆಯ ವೆಚ್ಚದಲ್ಲಿ ಇನ್ನಷ್ಟು ರಿಯಾಯಿತಿಯನ್ನು ನೀಡುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ಮಹನೀಯರ ಜಯಂತಿ ಅದ್ದೂರಿ ಆಚರಣೆ: ಡಿಸಿ ಪ್ರಶಾಂತ್ ಮಿಶ್ರಾ
ಈ ವೇಳೆ ಆಸ್ಪತ್ರೆಯ ವೈದ್ಯೆ ಡಾ. ಅಂಜಲಿ, ಡಾ. ಸತೀಶ್ ಕುಮಾರ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಇತರರಿದ್ದರು.