ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲಿಕರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಪಾಲಿಕೆ ಆಯುಕ್ತ ಜಿ ಖಲೀಲ್ ಸಾಬ್ ತಿಳಿಸಿದ್ದಾರೆ.
ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ 108, 109 ಮತ್ತು 109ಎ ನಿಯಮಗಳಿಗೆ ತಿದ್ದುಪಡಿ ಮಾಡಿ ಆಯಾ ವರ್ಷಕ್ಕೆ ಉಪನೊಂದಣಾಧಿಕಾರಿ, ಉಪನೊಂದಣಿ ಕಚೇರಿ ಇವರ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳು ಪರಿಷ್ಕರಣೆ ಆಗದಿದ್ದಲ್ಲಿ ಕನಿಷ್ಟ ಶೇ.3 ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ ಶೇ.5 ಕ್ಕಿಂತ ಹೆಚ್ಚಿಗೆ ಮೀರದಂತೆ ಆಸ್ತಿ ತೆರಿಗೆಯನ್ನು ವಿಧಿಸಿ ವಸೂಲಿ ಮಾಡಲು ತಿದ್ದುಪಡಿ ಮಾಡಲಾಗಿದೆ.
2025-26ನೇ ಸಾಲಿಗೆ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಿರುವುದಿಲ್ಲ ಎಂದು ತಿಳಿಸಿರುವ ಪ್ರಯುಕ್ತ 2025 ರ ಏ.01 ರಿಂದ 2026 ರ ಮಾ.31 ರ ವರೆಗೆ 2024-25ನೇ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ.3 ರಷ್ಟು ನಿಗದಿಪಡಿಸಿ ಹೆಚ್ಚಿಸಿ, 2025-26ನೇ ಸಾಲಿಗೆ ಆಸ್ತಿ ತೆರಿಗೆಯನ್ನು ನಿಗದಿಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಬಳ್ಳಾರಿ | ಸರ್ಕಾರಿ ಆದರ್ಶ ವಿದ್ಯಾಲಯದ ಪ್ರವೇಶ ಪತ್ರ ಪ್ರಕಟ
ಹಾಗಾಗಿ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿ ಬಳ್ಳಾರಿ ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಆಯುಕ್ತರು ಕೋರಿದ್ದಾರೆ.