ಬಳ್ಳಾರಿ ನಗರದ 22ನೇ ವಾರ್ಡಿನ ಪರಿಶಿಷ್ಟ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಇಂದು ಮುಂಜಾನೆ ಮಹಾನಗರ ಪಾಲಿಕೆ ಸದಸ್ಯ ಕೆ ಹನುಮಂತಪ್ಪ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
“ಊಟದಲ್ಲಿ ತರಕಾರಿ ಹಾಕುವುದಿಲ್ಲ. ಊಟಕ್ಕೆ ಸಮಯ ನಿಗದಿಪಡಿಸಿದ್ದು, ತಡವಾಗಿ ಬರುವ ವಿದ್ಯಾರ್ಥಿನಿಯರಿಗೆ ಊಟ ನೀಡುವುದಿಲ್ಲ. ಅಡುಗೆದಾರರು ಊಟವನ್ನು ತಾವೇ ಡಬ್ಬಿಯಲ್ಲಿ ತುಂಬಿಕೊಂಡು ಹೋಗುತ್ತಾರೆ. ಇದರಿಂದ ನಮಗೆ ಊಟ ಸರಿಯಾಗಿ ಸಿಗದೆ ತೊಂದರೆಯಾಗುತ್ತದೆ, ಶೌಚಾಲಯ ಹಾಗೂ ಕೋಣೆಗಳನ್ನು ಶುಚಿಗೊಳಿಸುವುದಿಲ್ಲ” ಎಂದು ವಿದ್ಯಾರ್ಥಿನಿಯರು ತಮ್ಮ ಅಹವಾಲನ್ನು ಪಾಲಿಕೆ ಸದಸ್ಯರ ಎದುರು ಹೇಳಿಕೊಂಡರು.
ಹಾಸ್ಟೆಲ್ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಸಮಸ್ಯೆಯನ್ನು ತಿಳಿದುಕೊಂಡು ಅಧಿಕಾರಿಗಳಿಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ತಾಕೀತು ಮಾಡಿದ ಹನುಮಂತಪ್ಪ, ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ ಬಾಲಕಿಯರ ಆರೋಗ್ಯವನ್ನು ಕಾಪಾಡಬೇಕೆಂದು ಜಿಲ್ಲಾ ಅಧಿಕಾರಿ ಮತ್ತು ತಾಲೂ ಅಧಿಕಾರಿಗಳಿಗೆ ಸೂಚಿಸಿದರು. ಅಷ್ಟೇ ಅಲ್ಲದೆ ಸ್ಥಳದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಅಬ್ದುಲ್ಲಾ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಬೇಕೆಂದು ವಿನಂತಿಸಿದರು.
“ವಿದ್ಯಾರ್ಥಿನಿಯರಿಗೆ ನಿಲಯದಲ್ಲಿ ಸ್ವಚ್ಛ ಭಾರತ್ ಅಭಿಯಾನ ಅಳವಡಿಸಿಕೊಂಡು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಮತ್ತು ಬಳಸಿ ಬಿಸಾಡುವ ಪ್ಯಾಡ್‌ಗಳನ್ನು ಶೌಚಾಲಯಗಳಲ್ಲಿ ಎಸೆಯಬಾರದು. ಇದರಿಂದ ಒಳಚರಂಡಿ ವ್ಯವಸ್ಥೆಗೆ ತೊಂದರೆಯಾಗುತ್ತದೆ” ಎಂದು ಸಲಹೆ ನೀಡಿದರು.
ಫುಡ್ ಪಾಯಿಸನ್‌ನಿಂದ ಮಹಾದೇವಿ, ಚಂದನ ಮತ್ತು ಅಶ್ವಿನಿ ಎಂಬ ವಿದ್ಯಾರ್ಥಿನಿಯರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಮಟ್ಟದ ಆಹಾರ ಮತ್ತು ಶುದ್ಧವಾದ ಕುಡಿಯುವ ನೀರನ್ನು ಒದಗಿಸಲು ಇಲಾಖೆಯ ಜಿಲ್ಲಾ ಅಧಿಕಾರಿ ದಿವಾಕರ್, ತಾಲೂಕು ಅಧಿಕಾರಿ ಗಾದಿಲಿಂಗಪ್ಪ ಅವರಿಗೆ ಸೂಚಿಸಿದರು.
ಫುಡ್ ಪಾಯಿಸನ್ ಕುರಿತು ವಾರ್ಡನ್ ಅವರಲ್ಲಿ ವಿಚಾರಿಸಿದಾಗ, “ವಿದ್ಯಾರ್ಥಿ ನಿಲಯದಲ್ಲಿ ಸುಮಾರು 70 ಜನ ವಿದ್ಯಾರ್ಥಿನಿಯರಿದ್ದಾರೆ. ಅವರಿಗೆಲ್ಲ ಬಿಟ್ಟು ಕೇವಲ ಮೂರು ಮಂದಿಗೆ ಮಾತ್ರ ಫುಡ್ ಪಾಯಿಸನ್ ಆಗಿದೆ, ಕೆಲ ವಿದ್ಯಾರ್ಥಿನಿಯರು ಎಷ್ಟು ಹೇಳಿದರೂ ಕೇಳದೆ ಜಂಕ್ ಫುಡ್ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಬಳಸಿದ ಪ್ಯಾಡ್‌ಗಳನ್ನು ಶೌಚಾಲಯದಲ್ಲಿ ಹಾಕಿ ಅವುಗಳನ್ನು ಬ್ಲಾಕ್ ಆಗುವಂತೆ ಮಾಡುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊರಟಗೆರೆ | ಬೈಚಾಪುರ ಗ್ರಾಪಂ ಅಧ್ಯಕ್ಷೆಯಾಗಿ ರಾಮಲಕ್ಷ್ಮಮ್ಮ ಆಯ್ಕೆ
“ಏನೇ ಆಗಲಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದು ತಾಲೂಕು ಅಧಿಕಾರಿ ಗಾದಿಲಿಂಗಪ್ಪ ತಿಳಿಸಿದರು
ಪರಿಶಿಷ್ಟ ವರ್ಗಗಳ ಜಿಲ್ಲಾ ಅಧಿಕಾರಿ ದಿವಾಕರ್, ಪಾಲಿಕೆ ಸದಸ್ಯ ಹನುಮಂತಪ್ಪ, ಗಡ್ಡಂ ತಿಮ್ಮಪ್ಪ, ಊಳೂರು ಸಿದ್ದೇಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಹಾಗೂ ಇತರರು ಇದ್ದರು.