ಪಿಎಫ್‌ಐ ಕಾರ್ಯಕರ್ತರಿಗೆ ಸಶಸ್ತ್ರ ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ಪಿಎಫ್‌ಐ ಮುಖಂಡ ನೊಸಂ ಮಹಮದ್ ಯೂನುಸ್ (33)ನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದಲ್ಲಿ ಸುಳ್ಳು ಹೆಸರಿನಲ್ಲಿ ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದ ನಂದ್ಯಾಲದವರಾದ ನೊಸಂ ಮಹಮದ್ ಯೂನುಸ್ ನಿಜಾಮಾಬಾದ್ ಭಯೋತ್ಪಾದನೆ ಪಿತೂರಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನೂ ಎದುರಿಸುತ್ತಿದ್ದಾರೆ. ಆ ಪ್ರಕರಣ ಸಂಬಂಧ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆತನ ನಿವಾಸದ ಮೇಲೆ ಎನ್ಐಎ ದಾಳಿ ನಡೆಸಿತ್ತು. ಆಗ, ಆತ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದರು.
ಬಳಿಕ ತನ್ನ ಕುಟುಂಬದೊಂದಿಗೆ ಬಳ್ಳಾರಿಗೆ ಬಂದು ಕೌಲ್‌ಬಜಾರ್ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು. ತನ್ನ ಹೆಸರನ್ನು ಬಷೀರ್ ಎಂದು ಬದಲಿಸಿಕೊಂಡು ಪ್ಲಂಬರ್ ಕೆಲಸ ಮಾಡುತ್ತಿದ್ದರು. ಪಿಎಫ್‌ಐ ಸಂಘಟನೆಗೆ ಸೇರಿಕೊಂಡಿರುವ ಅಮಾಯಕ ಯುವಕರಿಗೆ ಸಶಸ್ತ್ರ ತರಬೇತಿ ನೀಡುತ್ತಿದ್ದರೆಂದು ಆರೋಪಿಸಲಾಗಿದೆ.
ವಿಚಾರಣೆ ಸಮಯದಲ್ಲಿ ಬಂಧಿತ ಯೂನುಸ್, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಇಲಿಯಾಸ್ ಎಂಬಾತನ ಬಗ್ಗೆ ಸುಳಿವು ನೀಡಿದ್ದಾರೆ. ಇಲಿಯಾಸ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣದ ಸಂಬಂಧ ತೆಲಂಗಾಣ ಪೊಲೀಸರು 2022ರ ಜುಲೈ 4ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ತನಿಖೆಯನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಎನ್ಐಎ ಮರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈವರಗೆ 16 ಆರೋಪಿಗಳ ವಿರುದ್ಧ 2 ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಂಡತಿಯನ್ನು ಮನೆಗೆ ಕಳುಹಿಸದಿದ್ದಕ್ಕೆ ಅತ್ತೆಗೆ ಚೂರಿ ಇರಿದ ಅಳಿಯ
ನಿಜಾಮಾಬಾದ್ ಪ್ರಕರಣದಕ್ಕೆ ಸಂಬಂಧಿಸಿ ಈಗಾಗಲೇ ಶೇಕ್ ಶಾದುಲ್ಲಾ (40), ಮೊಹಮ್ಮದ್ ಇಮ್ರಾನ್ (22) ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ (27) ಎಂಬ ಮೂವರನ್ನು ಬಂಧಿಸಲಾಗಿದೆ. ಇವರು ಸ್ಥಳೀಯ ಮುಸ್ಲಿಂ ಯುವಕರನ್ನು ಗುರುತಿಸಿ, ಅವರನ್ನು ದುರ್ಬೋಧನೆಯ ಮೂಲಕ ಪ್ರೇರೇಪಿಸಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದುದು ಗೊತ್ತಾಗಿದೆ.