ಬಳ್ಳಾರಿ ಜಿಲ್ಲೆಯಾದ್ಯಂತ ಯೂರಿಯಾ ಗೊಬ್ಬರದ ಕೊರತೆ ಹಾಗೂ ಬೆಲೆ ಏರಿಕೆ ಹೆಚ್ಚಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಗೊಬ್ಬರದ ಕೊರತೆ ನೀಗಿಸಿ, ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸಬೇಕು. ರೈತರಿಗೆ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಆಗ್ರಹಿಸಿ ರಾಜ್ಯ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಅನಿಲ್‌ಕುಮಾರ್ ಗೆ ಮನವಿ ಸಲ್ಲಿಸಿದರು.
ಸಂಡೂರು ತಾಲೂಕಿನಾದ್ಯಂತ ಯೂರಿಯಾ ಗೊಬ್ಬರದ ಕೊರತೆ ಹೆಚ್ಚಾಗಿದ್ದಲ್ಲದೇ ಕಾಳಸಂತೆಯಲ್ಲಿ ಹೆಚ್ವಿನ ಬೆಲೆಗೆ ಮಾರಾಟವಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.
ಸಂಘಟನೆ ಅಧ್ಯಕ್ಷ ಜಿ.ಪಂಪನಗೌಡ ಮಾತನಾಡಿ, “ತಾಲೂಕಿನಾದ್ಯಂತ ಉತ್ತಮ ಮಳೆ ಸುರಿದಿದೆ. ರೈತರು ಬಿತ್ತನೆ ಮಾಡಿದ ಹೈಬ್ರಿಡ್ ಜೋಳ, ಮೆಕ್ಕೆಜೋಳ ಸೇರಿ ನಾನಾ ಬೆಳೆಗಳಿಗೆ ಯೂರಿಯಾ ಸೇರಿದಂತೆ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಸರಕಾರ ಯೂರಿಯಾ ಸೇರಿ ಇತರೆ ಗೊಬ್ಬರದ ಬೆಲೆ ಏರಿಸಿರುವುದು ಅನ್ಯಾಯ. ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರದ ಪೂರೈಕೆ ಮಾಡದಿರುವುದರಿಂದ ಕಾಳಸಂತೆಯಲ್ಲಿ ನಿಗದಿಗಿಂತ ಹೆಚ್ಚಿನ ಬೆಲೆಯಲ್ಲಿ ಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸಲಾಗುತ್ತಿದೆ. ಕೃತಕ ಗೊಬ್ಬರದ ಅಭಾವ ಸೃಷ್ಟಿಸಬಾರದು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಳ್ಳಾರಿ | ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸುವಂತೆ ಎಐಕೆಕೆಎಂಎಸ್ ಆಗ್ರಹ
ಈ ವೇಳೆ ಕೆ.ನಾಯ್ಡು, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಖಲಂದರ್ ಬಾಷಾ, ಕೆ.ಆರ್.ಎಸ್.ಪಕ್ಷದ ತಾಲೂಕು ಅಧ್ಯಕ್ಷ ಖಾದರ್ ಬಾಷಾ, ಜನ ಸಂಗ್ರಾಮ ಪರಿಷತ್‌ನ ಶ್ರೀಶೈಲ ಆಲ್ಟಳ್ಳಿ, ಕೆಪಿಆರ್‌ಎಸ್ ಅಧ್ಯಕ್ಷ ಪಿ.ರಮೇಶ ಹಾಗೂ ಇತರರು.