ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಎಂಬಾತ ಬಂಡಿಹಟ್ಟಿ ಪ್ರದೇಶದಲ್ಲಿ 44 ಕುಟುಂಬಗಳ ಸುಮಾರು 135 ಎಕರೆ ಭೂಮಿಯನ್ನು ಕಬಳಿಕೆ ಮಾಡಿಕೊಂಡಿದ್ದಾರೆ., ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಭೂಮಿ -ವಸತಿ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನೆ ಒತ್ತಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗ್ರಾಮಾಂತರ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಮತ್ತು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಭೂಗಳ್ಳ ನಾರಾ ಪ್ರತಾಪ್ ರೆಡ್ಡಿ ಬೆನ್ನಿಗೆ ನಿಲ್ಲದೆ, 44 ಕುಟುಂಬಗಳ ಬೆನ್ನಿಗೆ ನಿಂತು ಭೂ ವಂಚಿತರಿಗೆ ನ್ಯಾಯ ಒದಗಿಸಬೇಕು” ಎಂದು ಶಾಸಕರಿಗೆ ಮನವಿ ಮಾಡಿದ್ದಾರೆ.
“ಪ್ರತಾಪರೆಡ್ಡಿ ಪ್ರಭಾವದಿಂದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಈ ಜಮೀನಿನ ಸರ್ವೆ ಮಾಡುತ್ತಿಲ್ಲ. ಬಂಡಿಹಟ್ಟಿಯ ನಮ್ಮ ಜಮೀನಿನ ಸರ್ವೆ ದಾಖಲೆಗಳನ್ನು ನಾವು ಕೇಳಿದರೆ ತಹಶೀಲ್ದಾರ್ ನೀಡುವುದಿಲ್ಲ. ಅದೇ ದಾಖಲೆಗಳನ್ನು ಪ್ರತಾಪ್ ರೆಡ್ಡಿ ಕೇಳಿದರೆ ಕೊಡುತ್ತಾರೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ” ಎಂದು ಕರಿಯಪ್ಪ ಗುಡಿಮನೆ ಆರೋಪಿಸಿದರು.
“ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯ ಎರಡು ತಿಂಗಳಲ್ಲಿ ಬಗೆಹರಿಸಿ ಕೊಡುವುದಾಗಿ ಹೇಳಿದ್ದು, ಆರು ತಿಂಗಳಾದರೂ ಬಗೆಹರಿಸಿಲ್ಲ” ಎಂದು ಅವಲತ್ತುಕೊಂಡಿದ್ದಾರೆ.
“ತಾಲೂಕಿನ ಚಾನಾಳ್ ಮತ್ತು ಹಂಪಾದೇವನಹಳ್ಳಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲೂ ಇದೇ ರೀತಿ ಆಗಿದ್ದು, ಸರ್ಕಾರ ನೀಡಿರುವ ಜಮೀನು ಉಳ್ಳವರ ಪಾಲಾಗಿದೆ. ಆದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ” ಎಂದು ಆರೋಪಿಸಿದರು.
“ಜಿಲ್ಲಾಡಳಿತ ಆದಷ್ಟು ಬೇಗ ಟ್ರಿಬುನಲ್ ಮತ್ತು ಭೂ ಮಂಜೂರಾತಿ ಕುರಿತು ಕ್ರಮ ಕೈಗೊಂಡು ಆದಷ್ಟು ಬೇಗ ಸ್ಥಳೀಯರಿಗೆ ಭೂಮಿ ಮತ್ತು ವಸತಿ ನೀಡಬೇಕು. ಜೊತೆಗೆ ಚಾನಳ್ ಗ್ರಾಮದಲ್ಲಿನ ಜಮೀನಿನ ಟ್ರಿಬುನಲ್ ಕೇಸ್‌ಗಳನ್ನು ಶರವೇಗದಲ್ಲಿ ಇತ್ಯರ್ಥ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಬರದ ಭೀತಿ ಇದ್ದರೂ ರೈತರ ಸಭೆ ಕರೆಯದ ಜಿಲ್ಲಾಡಳಿತ; ಉಮೇಶ ಮುದ್ನಾಳ ಆರೋಪ
“ಕಂಪ್ಲಿ ತಾಲೂಕು ಹಂಪ ದೇವನಹಳ್ಳಿ ಗ್ರಾಮದಲ್ಲಿ 125 ಎಕರೆ ಭೂ ಪ್ರದೇಶವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ” ಎಂದು ಚ್ಚರಿಕೆ ನೀಡಿದರು.
ವಸಂತರಾಜ್, ರಾಮಕೃಷ್ಣ, ರಾಜಶೇಖರ ರೆಡ್ಡಿ, ಮೋಹನ ಬಂಡಿಹಟ್ಟಿ, ರಾಮಕೃಷ್ಣ, ವಸಂತರಾಜ್ ಕಹಳೆ, ಎಸ್ ಕೆ ರಿಯಾಜ್ ಸೇರಿದಂತೆ ಇತರರು ಇದ್ದರು.