ಬಳ್ಳಾರಿ ಜಿಲ್ಲೆಯ ತೊಲಮಾಮಿಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಗೇ ಸೌಕರ್ಯ ಒದಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಿಸಿ ರಸ್ತೆ, ಒಳಚರಂಡಿಗಳು ಸಂಪೂರ್ಣ ಹಾಳಾಗಿವೆ. ಸ್ಮಶಾನ ಇಲ್ಲದಂತಾಗಿದೆ. ಸರ್ಕಾರಿ ಶಾಲೆಗೆ ಕಾಂಪೌಂಡ್ ಇಲ್ಲದೆ, ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗಿದೆ.
ಗ್ರಾಮದಲ್ಲಿನ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಯಾಗಿವೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅತ್ಯಸಂಸ್ಕಾರ ಮಾಡುವುದಕ್ಕೂ ಸ್ಥಳ ಇಲ್ಲದಂತಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿತ್ತಾದರೂ,ಕಾಮಗಾರಿ ನಡೆದಿಲ್ಲ.
ಮಳೆಗಾಲದಲ್ಲಿ ರಸ್ತೆಯಲ್ಲಿ ಕೆಸರು ತುಂಬಿಕೊಂಡು, ಓಡಾಡುವುದೂ ಕಷ್ಟವಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ಅರಂಭಿಸಿ, ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳೀಯ ನಿವಾಸಿ ಯುವರಾಜ್ ತಲಾಮಾಮಿಡಿ ಈದಿನ.ಕಾಮ್ ಜೊತೆ ಮಾತನಾಡಿದ್ದು, “ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ಸಮಸ್ಯೆಗಳ ಬಗ್ಗೆ ಈದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ ಶಂಕರ್ ಬಂಡೆ ಗ್ರಾಮ ಪಂಚಾಯತಿ ಪಿಡಿಒ ಸಾಬ್ ಜಹಾನ, “ಗುರುವಾರ ಶಂಕರ್ ಬಂಡೆ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ ಬಳಿಕ ತೊಲಮಾಮಿಡಿ ಗ್ರಾಮದಲ್ಲಿ ಸಾರ್ವಜನಿಕ ರುದ್ರ ಭೂಮಿಯನ್ನು ಮನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲಾಗುವುದು” ಎಂದು ಹೇಳಿದ್ದಾರೆ.