ರಾಜ್ಯದಲ್ಲಿ ಎರಡನೇ ಅತಿದೊಡ್ಡ ಜಿಲ್ಲಾ ನ್ಯಾಯಾಲಯ ಎಂಬ ಖ್ಯಾತಿ ಪಡೆದಿರುವ ಬಳ್ಳಾರಿಯ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಉದ್ಘಾಟನೆ ಆಗಿ ವರ್ಷ ಕಳೆದರೂ ಕೂಡ ಹಳೆ ನ್ಯಾಯಾಲಯದ ಕಚೇರಿ ಮತ್ತು ಸಿಬ್ಬಂದಿ ಈವರೆಗೆ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿಲ್ಲ.
ನಗರದ ತಾಳೂರು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ಅಂದಾಜು 121 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಜಿಲ್ಲಾ ನ್ಯಾಯಾಲಯ ನಿರ್ಮಾಣವಾಗಿದ್ದು, ಸಂಕೀರ್ಣ ಕಟ್ಟಡವನ್ನು 2022ರ ಜುಲೈ 26ರಂದು ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರೀತುರಾಜ್ ಅವರು ಉದ್ಘಾಟಿಸಿದ್ದರು.

ನ್ಯಾಯಾಲಯದ ಸಂಕೀರ್ಣ ಕಟ್ಟಡವನ್ನು ಪೂರ್ಣಗೊಳಿಸಲು ನಿಗದಿತ ಹಣಕ್ಕಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಆದ ನಂತರ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆಂದು ಹೇಳಿ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರಿನಲ್ಲಿ ಐಫೋನ್ ತಯಾರಿಕಾ ಘಟಕ: 8,800 ಕೋಟಿ ರೂ. ಹೂಡಿಕೆ, 14,000 ಉದ್ಯೋಗ ಸೃಷ್ಟಿ
“ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡದ ಕೆಲಸ ಪ್ರಗತಿಯಲ್ಲಿದ್ದು, ನ್ಯಾಯಾಲಯದ ಕಟ್ಟಡಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸಿಲ್ಲ. ಕಚೇರಿಗಳಿಗೆ ಬೇಕಾಗಿರುವ ಅಗತ್ಯ ಸಲಕರಣೆಗಳು ಹಳೆ ಕಟ್ಟಡದಲ್ಲಿರುವ ಪರಿಣಾಮ ವರ್ಷ ಕಳೆದರೂ ನ್ಯಾಯಾಲಯದ ಇಲಾಖೆ ಸಿಬ್ಬಂದಿ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ” ಎಂದು ಹಿರಿಯ ವಕೀಲ ಕೋಟೇಶ್ವರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ವರ್ಷ ಕಳೆದರೂ ನೂತನ ಜಿಲ್ಲಾ ನ್ಯಾಯಾಲಯ ಆರಂಭವಾಗಿಲ್ಲ. ಆವರಣದಲ್ಲಿ ಸ್ವಚ್ಚತೆ ಕೊರತೆ ಇದ್ದು, ಗಿಡ ಗಂಟೆಗಳು ಬೆಳೆದಿವೆ. ಅದನ್ನೂ ಕೂಡ ಸ್ವಚ್ಛ ಮಾಡುತ್ತಿಲ್ಲ” ಎಂದು ಸಾರ್ವಜನಿಕರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಲಂಟಿಯರ್ ರಾಧಾಕೃಷ್ಣ ಅವರ ಮಾಹಿತಿ ಆಧರಿಸಿದ ವರದಿ