ಅನಧಿಕೃತವಾಗಿ ನೀರಾವರಿ ಸೌಲಭ್ಯ ಪಡೆಯುತ್ತಿರುವ ವ್ಯಕ್ತಿಗಳನ್ನು ಬಂಧಿಸಬೇಕು. ರಾಜಾರೋಷವಾಗಿ ಕಾಲುವೆಗಳಿಗೆ ಹಾಕಿರುವ ಪೈಪುಗಳು ಮತ್ತು ಮೋಟಾರ್‌ಗಳನ್ನೂ ಜಪ್ತಿ ಮಾಡಿ ಅಧಿಕೃತ ನೀರಾವರಿ ರೈತರಿಗೆ ನೀರು ತಲುಪಿಸಲು ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಸಿರಗುಪ್ಪ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
“ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಾಗೇವಾಡಿ ಕಾಲುವೆಯ ಕೆಳಭಾಗದ ರೈತರಾಗಿದ್ದು, ನಾವು ಅಧಿಕೃತವಾಗಿ ನೀರಾವರಿ ಸೌಲಭ್ಯ ಹೊಂದಿದ್ದೇವೆ. ನಮ್ಮ ಹೊಲಗಳಿಗೆ ಕಾಲುವೆಯಿಂದ ಬರಬೇಕಾದ ನೀರು ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ. ಏಕೆಂದರೆ ಮೇಲ್ಭಾಗದ ಅನಧಿಕೃತ ರೈತರು ತಮ್ಮ ಹೊಲಗಳಿಗೆ ವಿದ್ಯುತ್ ಮೋಟಾರ್‌ಗಳು ಹಾಗೂ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ಕಾಲುವೆ ಮೂಲಕ ಹರಿಯುತ್ತಿರುವ ನೀರನ್ನು ಕೆಲವು ಭಾಗದಲ್ಲಿ ಕಳ್ಳತನದಿಂದ ಅನಧಿಕೃತವಾಗಿ ನೀರು ಹರಿಸಿಕೊಂಡು ಅಧಿಕೃತವಾಗಿರುವ ನಮ್ಮ ಜಮೀನುಗಳಿಗೆ ಸರ್ಕಾರದಿಂದ ಪಡೆದಿರುವ ನೀರು ಬರುತ್ತಿಲ್ಲ” ಎಂದು ಕಾರ್ಯಕರ್ತರು ಆಗ್ರಹಿಸಿದರು .
ರೈತ ಮುಖಂಡ ಜ್ಞಾನನಂದ ಸ್ವಾಮಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಾಲುವೆ ನೀರನ್ನು ಕೆರೆಗೆ ತಿರುಗಿಸಿ ಹೊಲ ಗದ್ದೆಗಳಿಗೆ ನೀರು ಬಿಡುತ್ತಾರೆ. ಹಾಗೆಯೇ ಕಾಲುವೆ ನೀರನ್ನು ಸತತ ಕೆರೆಗೆ ಹರಿಸುತ್ತಾರೆ. ಕೆಳಭಾಗದ ಜನರಿಗೆ ಕಾಲುವೆ ನೀರು ಬರುವುದಿಲ್ಲ. ಹಾಗಾಗಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕೆಳ ಭಾಗದ ರೈತರಿಗೆ ನೀರು ಹರಿಸುವಂತೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ ಕಾಲುವೆ; 104 ಮೈಲ್ ಕೆಳಭಾಗದ ರೈತರಿಗೆ ನೀರೊದಗಿಸಲು ವಿಫಲ
“ಹಲವು ಬಾರಿ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ರೈತರು ಅವಲತ್ತುಕೊಂಡರು
ಈ ಸಂದರ್ಭದಲ್ಲಿ ಕೇಶವಪ್ಪ, ಹುಸೇನ ಬಾಷಾ, ನಾಗರಾಜ್ ಸೇರಿದಂತೆ ಇತರರು ಇದ್ದರು.
ವರದಿ : ಗುರುಸ್ವಾಮಿ ಸಿರಗುಪ್ಪ