ಫೆಬ್ರವರಿಯ ಕೊನೆಯ ವಾರದಲ್ಲಿ ಜರುಗುವ ಹಂಪಿ ಉತ್ಸವ-2025ದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಹೋರಾಟಗಾರ ವಿ ಬಿ ಮಲ್ಲಪ್ಪ ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ವಿಜಯನಗರ ಜಿಲ್ಲೆಯ ಹಂಪಿ ಉತ್ಸವ ನಡೆಯುತ್ತಿರುವುದು ಈಗಾಗಲೇ ಬಹುತೇಕ ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ವಿಜಯನಗರ ಜಿಲ್ಲಾಡಳಿತ ಮತ್ತು ಅಲ್ಲಿನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆಗಳೂ ಕೂಡ ಭರದಿಂದ ಸಾಗಿವೆ. ಇದು ಸಂತಸದ ವಿಷಯ. ಆದರೆ, ಹಂಪಿ ಉತ್ಸವದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು” ಎಂದರು.
“ಹಂಪಿ ಉತ್ಸವ ಜನೋತ್ಸವವಾಗಬೇಕೆಂದು ಅದರ ರೂವಾರಿಗಳಾಗಿದ್ದ ಎಂ ಪಿ ಪ್ರಕಾಶ ಅವರ ಕನಸು ಮತ್ತು ಬಯಕೆಯಾಗಿತ್ತು. ಆ ಹಿನ್ನೆಲೆಯಲ್ಲಿ ಸ್ಥಳೀಯ ಕಲಾವಿದರಿಗೆ, ಸಾಹಿತಿಗಳಿಗೆ ಸಿಗಬೇಕಾಗಿದೆ. ವಿಚಿತ್ರವೆಂದರೆ ಹೆಚ್ಚಿನ ಆದ್ಯತೆ ಯಾವಾವುದೋ ಕಾರಣಗಳಿಂದಾಗಿ ಉತ್ಸವದಲ್ಲಿ ಭಾಗವಹಿಸಿದವರಿಗೆ ಪದೇ ಪದೆ ಅವಕಾಶ ಸಿಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಅವಕಾಶ ಸಿಗದ ಇತರೆ ಕಲಾವಿದರು ಅವಕಾಶ ವಂಚಿತರಾಗುವಂತಾಗಿದೆ. ಇನ್ನೊಂದೆಡೆ ಕೆಲ ಲಾಭಿಕೋರ ಮನಸುಗಳು ಹಂಪಿ ಉತ್ಸವದ ನಿರಂತರ ಫಲಾನುಭವಿಗಳಾಗಿ ದಾಖಲೆ ಸ್ಥಾಪಿಸತೊಡಗಿದ್ದಾರೆ. ಈ ಪೈಕಿ ಸಂವೇದನಾರಹಿತ ಶಿಕ್ಷಕರೊಬ್ಬ ಒಂದು ದಶಕದ ಕಾಲ ಸತತವಾಗಿ ಕಾಯಂ ನಿರೂಪಕರಾಗಿ, ದಿನಕ್ಕೆ ಹತ್ತು ಸಾವಿರಗಳಂತೆ ಮೂರು ದಿನಗಳವರೆಗೆ ಗೌರವ ಧನ ಪಡೆದುಕೊಳ್ಳುತ್ತ ಎಲ್ಲ ಲಾಭ ಪಡೆದುಕೊಳ್ಳುತ್ತಿವುದು ಸರ್ವೇಸಾಮಾನ್ಯವಾಗಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೂಲದ ಪರಮೇಶ್ವರ ಸೊಪ್ಪಿಮಠ ಎಂಬ ಶಿಕ್ಷರಿಗೆ ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ನಾಟಕ ಜನಸಾಮಾನ್ಯರ ಕಲೆ: ಕುಲಪತಿ ಪರಮಶಿವಮೂರ್ತಿ
“ಪರಮೇಶ್ವರ ಸೊಪ್ಪಿಮಠರಿಗಿಂತಲೂ ಅತ್ಯುತ್ತಮವಾಗಿ ಮಾತನಾಡುವ, ಕಾರ್ಯಕ್ರಮ ನಿರೂಪಿಸುವವರಿಗೆ ಕೊರತೆಯಿಲ್ಲ. ಆದರೂ ಸದಾ ನಿರೂಪಕನಾಗಿ ಅದರ ಲಾಭಪಡೆಯುತ್ತಿರುವುದರ ಬಗ್ಗೆ ನಮ್ಮ ಆಕ್ಷೇಪಗಳಿವೆ. ಈ ದಂಪತಿಯಿಬ್ಬರೂ ಶಿಕ್ಷಕರಾಗಿದ್ದು, ಸಬಲರಾಗಿದ್ದಾರೆ. ಆದರೆ ಆರ್ಥಿಕವಾಗಿ ಕಷ್ಟದಲ್ಲಿರುವ ಅರ್ಹರಿಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ” ಎಂದು ಒತ್ತಾಯಿಸಿದರು.
“ಈ ಬಗ್ಗೆ ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ಉತ್ಸವದ ಉಸ್ತುವಾರಿಗಳು ಗಮನಹರಿಸಬೇಕು. ಇಂತಹ, ಲಾಭಿಗಳನ್ನು ತಡೆಯಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತಾಗಗಬೇಕು” ಎಂದು ಕಾರ್ಯಕ್ರಮ ಆಯೋಜಕರಲ್ಲಿ ಒತ್ತಾಯಸಿದ್ದಾರೆ.