ಕೇಂದ್ರ ಸರ್ಕಾರ ನಿಯಮಾವಳಿಗಳ ಬದಲಾವಣೆ ಮಾಡಿದೆ ಎಂದು ಉಲ್ಲೇಖಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೇ ಇರುವುದು ಸರಿಯಲ್ಲ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯ ನೂತನ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಬಿಜೆಪಿ ರೈತ ಮೋರ್ಚಾ ತಾಲೂಕು, ಬಳ್ಳಾರಿ ಜಿಲ್ಲಾ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನಿಲುವು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ರಾಜ್ಯದಲ್ಲಿ 134 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕಿತ್ತು. ಆದರೆ ಈವರೆಗೂ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ನಿಯಮಾವಳಿಗಳ ಬದಲಾವಣೆಯಾಗಿದೆ ಎಂದು ನೆಪ ಹೇಳಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೇ ಇರುವುದು ಖಂಡನೀಯ. ಕೂಡಲೇ ಬರಗಾಲ ಘೋಷಿಸಿ ರೈತರನ್ನು ರಕ್ಷಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರೈತರ ಸಮಸ್ಯೆಗಳಿಗೆ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳಲಿ
“ಕಾಂಗ್ರೆಸ್ ಸರ್ಕಾರ ರಚನೆಯಾಗಿ ನೂರು ದಿನ ಪೂರೈಸಿದೆ. ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೊಡುವ 4,000 ರೂಪಾಯಿಯನ್ನು ನಿಲ್ಲಿಸಲಾಗಿದೆ. ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಎಪಿಎಂಸಿ ಕಾಯ್ದೆ ಹಿಂಪಡೆದರೂ, ವಿದ್ಯಾಸಿರಿ ಯೋಜನೆ ನಿಲ್ಲಿಸಿದ್ದಾರೆ” ಎಂದು ಟೀಕಿಸಿದರು.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ ಎಂ ಸತೀಶ್, ಜಿಲ್ಲಾ ಅಧ್ಯಕ್ಷ ಮುರಹರಿ ಗೌಡ, ಹಿರಿಯ ಮುಖಂಡರುಗಳಾದ ಹನುಮಂತಪ್ಪ, ರಾಮಲಿಂಗಪ್ಪ, ತಿಮ್ಮಾರೆಡ್ಡಿ, ರಾಜು ಸೇರಿದಂತೆ ಇತರರು ಇದ್ದರು.