ಜಮೀನು ವ್ಯಾಜ್ಯ ಪ್ರಕರಣವೊಂದರ ತನಿಖೆಗೆ ರಾತ್ರಿ ವೇಳೆ ಮನೆಗೆ ಆಗಮಿಸಿದ್ದ ಪೊಲೀಸರನ್ನೇ ‘ನಕ್ಸಲ್’ ಎಂದು ಆತಂಕಗೊಂಡು ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಿ, ಆ ಬಳಿಕ ಎರಡೂ ಕಡೆಯ ಪೊಲೀಸರು ವ್ಯಕ್ತಿಯ ಮನೆಗೆ ಬಂದ ಘಟನೆ ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನಾರಾವಿಯ ಕುತ್ಲೂರು ಎಂಬಲ್ಲಿ ನಡೆದಿದೆ.
ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತನಿಂದ ಈ ಗೊಂದಲವುಂಟಾಗಿದೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣವೊಂದು ದಾಖಲಾಗಿತ್ತು. ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬುವವರು ಜಮೀನು ಮಾರಾಟ ಮಾಡುವ ವಿಚಾರದಲ್ಲಿ ಜೋಸಿ ಆಂಟೋನಿ ವಂಚನೆ ಮಾಡಿದ್ದಾರೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ವಿಚಾರವಾಗಿ ಮೂಡುಬಿದಿರೆ ಪೊಲೀಸರು ಬೆಳಗ್ಗೆಆತನ ಮನೆಗೆ ತೆರಳಿದ್ದರು. ಯಾರೂ ಇಲ್ಲದ್ದನ್ನು ಗಮನಿಸಿ ಆ ಬಳಿಕ ನಿನ್ನೆ ರಾತ್ರಿ(ನ.21) 9.30ರ ಸುಮಾರಿಗೆ ಜೋಸಿ ಮನೆಗೆ ಹೋಗಿದ್ದರು. ಈ ವೇಳೆ ಪೊಲೀಸರನ್ನ ಕಂಡ ಜೋಸಿ ಅಂಟೋನಿ, ನಕ್ಸಲರು ಬಂದಿದ್ದಾರೆಂದು ಆತಂಕಗೊಂಡು ಮನೆ ಬಾಗಿಲು ತೆರೆಯಲಿಲ್ಲ. ಮನೆ ಒಳಗಿನಿಂದ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
‘ನಕ್ಸಲ್’ ಎಂಬ ಹೆಸರು ಕೇಳುತ್ತಲೇ ಜಾಗೃತಗೊಂಡ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ಜೋಸಿ ಮನೆಗೆ ರಾತ್ರೋರಾತ್ರಿ ದೌಡಾಯಿಸಿದ್ದಾರೆ. ಅಲ್ಲದೇ, ರಾತ್ರಿ ಜೋಸಿ ಮನೆಯ ಸುತ್ತಮುತ್ತ ಪರಿಶೀಲನೆ ಕೂಡ ನಡೆಸಿದ್ದಾರೆ.
ಇಂದು ಬೆಳಗ್ಗೆ ಕೆಲವು ಮಾಧ್ಯಮಗಳು ಇದರ ಸತ್ಯಾಸತ್ಯತೆಯನ್ನು ಅರಿಯದೆ ಹಾಗೂ ಪೊಲೀಸರ ವಿಚಾರಣೆಗೂ ಮುನ್ನವೇ ಸುದ್ದಿ ಬಿತ್ತರಿಸಿದ್ದು, ‘ಮನೆ ಬಾಗಿಲು ತೆಗೆಯಿರಿ ಮಂಗಳೂರಿನ ನಕ್ಸಲ್ ಪೀಡಿತ ಪ್ರದೇಶದ ಒಂಟಿ ಮನೆಗೆ ಅಪರಿಚಿತ ಗ್ಯಾಂಗ್ ಭೇಟಿ’ ಎಂಬಿತ್ಯಾದಿ ಶೀರ್ಷಿಕೆಯಲ್ಲಿ ವರದಿ ಮಾಡಿದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡಿತ್ತು.
ಆದರೆ ಈ ಬಗ್ಗೆ ಇಂದು (ನ.22) ಸರಿಯಾದ ವಿಚಾರಣೆ ನಡೆದಿದ್ದು, ಮನೆಗೆ ಬಂದದ್ದು ಮೂಡುಬಿದಿರೆ ಪೊಲೀಸರು. ಪ್ರಕರಣವೊಂದರ ದೂರಿನ ಹಿನ್ನೆಲೆಯಲ್ಲಿ ಜೋಸಿ ಅಂಟೋನಿಯ ಮನೆಗೆ ಪೊಲೀಸರು ಬಂದಿದ್ದರು ಎನ್ನುವ ವಿಚಾರ ಬಯಲಾಗಿದೆ. ಆ ಮೂಲಕ ನಕ್ಸಲರ ಆಗಮನ ಸುದ್ದಿಯ ಸತ್ಯಾಸತ್ಯತೆ ಹೊರಬಿದ್ದಿದೆ. ಜೋಸಿ ಆಂಟೋನಿಯ ಹೇಳಿಕೆಯಿಂದ ಪೊಲೀಸರು ಹಾಗೂ ನಾಗರಿಕರು ಕೆಲಕಾಲ ಆತಂಕಗೊಂಡಿದ್ದರು.
ಈ ಬಗ್ಗೆ ಈ ದಿನ.ಕಾಮ್ ಮೂಡಬಿದಿರೆ ಪೊಲೀಸರನ್ನು ಸಂಪರ್ಕಿಸಿದಾಗ, ಜಮೀನು ವ್ಯಾಜ್ಯದ ವಿಚಾರವಾಗಿ ಜೋಸಿ ಆಂಟೋನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆತ ಬೆಳಗ್ಗೆ ಇರಲಿಲ್ಲ ಎಂದು ನಮ್ಮ ಠಾಣೆಯ ಸುಮಾರು 3-4 ಸಿಬ್ಬಂದಿಗಳು ದೂರುದಾರರ ಜೊತೆಗೆ ರಾತ್ರಿ ವೇಳೆಗೆ ಹೋಗಿದ್ದೆವು. ಆದರೆ ಬಾಗಿಲು ತೆರೆಯದಿದ್ದಕ್ಕೆ ಹಿಂದೆ ಬಂದಿದ್ದೆವು. ಆದರೆ ಆತ ‘ನಕ್ಸಲ್’ ಅಂತ ಸುದ್ದಿ ಹಬ್ಬಿಸಿದ್ದಾನೆ. ಇದು ನಮಗೆ ಗೊತ್ತಾದ ಕೂಡಲೇ ವೇಣೂರು ಹಾಗೂ ಬೆಳ್ತಂಗಡಿ ಪೊಲೀಸರ ಸಹಿತ ಎಸ್‌ಪಿಯವರಿಗೂ ಮಾಹಿತಿ ನೀಡಿದ್ದೇವೆ. ಆತ ಬೇಕೆಂತಲೇ ಈ ರೀತಿ ನಡೆದುಕೊಂಡಿದ್ದಾನಾ ಗೊತ್ತಿಲ್ಲ’ ಎಂದು ತಿಳಿಸಿದರು.

ಈ ಬಗ್ಗೆ ಈ ದಿನ.ಕಾಮ್ ವೇಣೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀ ಶೈಲ ಅವರನ್ನು ಸಂಪರ್ಕಿಸಿದಾಗ, ನಮಗೆ ರಾತ್ರಿ ನಕ್ಸಲರು ಇರಬಹುದು ಎಂದು ಅನುಮಾನಿಸಿ ಜೋಸಿ ಆಂಟೋನಿ ಎಂಬುವವರು ಕರೆ ಮಾಡಿದ್ದರು. ಮಾಹಿತಿ ತಿಳಿದ ತಕ್ಷಣವೇ ಆತನ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಬಳಿಕ ರಾತ್ರಿ ಸ್ಥಳೀಯ ಪ್ರದೇಶಗಳಲ್ಲೂ ಹುಡುಕಾಟ ನಡೆಸಿದ್ದೆವು. ಏನೂ ಗೊತ್ತಾಗಲಿಲ್ಲ. ಇಂದು ವಿಚಾರಣೆ ನಡೆಸಿದಾಗ ಆತನ ಮನೆಗೆ ರಾತ್ರಿ ಹೋಗಿದ್ದು ಮೂಡಬಿದಿರೆ ಪೊಲೀಸರು ಎಂದು ಗೊತ್ತಾಗಿದೆ. ಈ ಬಗ್ಗೆ ಜೋಸಿ ಆಂಟೋನಿ ಅವರಿಗೂ ತಿಳಿಸಿದ್ದೇವೆ. ಜಮೀನು ವ್ಯಾಜ್ಯದ ವಿಚಾರವಾಗಿ ಅವರು ಮನೆಗೆ ಹೋಗಿದ್ದರು. ಈ ಬಗ್ಗೆ ಮೂಡಬಿದಿರೆ ಠಾಣೆಗೆ ಹೋಗುವಂತೆ ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.