ಅಗತ್ಯ ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಮಾಲ್ ಕರಾಯ ಅವರು ಹೆರಿಗೆ ಬೇನೆಯಿಂದ ಚಡಪಡಿಸುತ್ತಿದ್ದ ಮಹಿಳೆಯೊಬ್ಬರಿಗೆ ಸ್ಪಂದಿಸುವ ಮೂಲಕ ಅವರ ಕಾರಿನಲ್ಲೇ ಮಹಿಳೆಗೆ ಹೆರಿಗೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಜು. 1 ರ. ವೈದ್ಯರ ದಿನದಂದು ನಡೆದಿದೆ.
ಜಮಾಲ್ ಅವರ ಕಾರಿನಲ್ಲೇ ತನ್ನ ಚೊಚ್ಚಲ ಗಂಡು ಮಗುವಿಗೆ ಜನನವಾಗಿರುವ ಮಹಿಳೆ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿದ್ದು, ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದಾರೆ.
ಸುನ್ನತ್‌ಕೆರೆ ನಿವಾಸಿ ಇಕ್ಬಾಲ್ ಎಂಬುವವರ ಪತ್ನಿ ತುಂಬು ಗರ್ಭಿಣಿ ಸಫಿಯಾ ಅಳದಂಗಡಿ ಅವರು ತೀವ್ರವಾದ ಹೆರಿಗೆ ನೋವಿನೊಂದಿಗೆ ರಸ್ತೆ ಬದಿನಿಂತುಕೊಂಡಿದ್ದರು. ಇದನ್ನು ಗಮನಿಸಿದ ಜಮಾಲ್ ಅವರು ತನ್ನ ಕಾರನ್ನು ತಿರುಗಿಸಿ ಬಂದು ವಿಚಾರಿಸಿದರು. ದಂಪತಿಯ ಸಂಕಷ್ಟ ಅರಿತ ಅವರು ತನ್ನ ಪ್ರಯಾಣ ಮೊಟಕುಗೊಳಿಸಿ ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಕುಳ್ಳಿರಿಸ ಆಸ್ಪತ್ರೆಯತ್ರ ಪ್ರಯಾಣ ಬೆಳೆಸಿದರು. ಆದರೆ ಅದಾಗಲೇ ಸಫಿಯಾ ಅವರು ಕಾರಿನಲ್ಲೇ ಪ್ರಸವಿಸಿದ್ದಾರೆ.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ: ‘ರೈತರ ಬಗ್ಗೆ ಸಿಎಂ ಕರುಣೆ ತೋರಿಸಬೇಕು’ ಎಂದ ನಟಿ ರಮ್ಯಾ
ಪ್ರಸವದ ವೇಳೆ ಪತಿ ಇಕ್ಬಾಲ್ ಅವರು ಮತ್ತು ಜಮಾಲ್ ಅವರು ಮಹಿಳೆಗೆ ತುರ್ತು ಸ್ಪಂದಿಸಿದ್ದು ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಒಂದುವೇಳೆ ಜಮಾಲ್ ಆ ಸಂದರ್ಭದಲ್ಲಿ ಬರದೇ ಹೋಗುತ್ತಿದ್ದರೆ ಅನಾಹುತ ಆಗುವ ಸಂಭವವ ಕೂಡ ಇತ್ತು. ಅಂತೂ ವೈದ್ಯರ ದಿನದಂದು ಸಫಿಯಾ ಪಾಲಿಗೆ ತನ್ನ ಪತಿ ಮತ್ತು ಜಮಾಲ್ ಅವರೇ ವೈದ್ಯರಂತೆ ಬಂದು ಪ್ರಾಣ ಕಾಪಾಡಿದ್ದಂತೂ ಸತ್ಯ. ಇದೀಗ ಜಮಾಲ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.