ಧರ್ಮಸ್ಥಳ ಗ್ರಾಮದಲ್ಲಿ ಬಾಲಕಿ ಶವ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಆ.8) ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪದ ಹೊಸ ಸ್ಥಳದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಅಸ್ಥಿಪಂಜರ ದೊರೆತಿಲ್ಲ ಎಂದು ಉನ್ನತ ಮೂಲಗಳು ಖಚಿತ ಪಡಿಸಿವೆ.
ಇಂದು ನಡೆದ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಮತ್ತಿತರ ಅಧಿಕಾರಿಗಳು ಜತೆಯಲ್ಲಿದ್ದರು. ಈ ತಂಡದ ಜತೆಗೆ 10-15 ಕಾರ್ಮಿಕರು ಕಾಡಿನೊಳಗೆ ತೆರಳಿದ್ದಾರೆ. ಶಾಲಾ ಬ್ಯಾಗ್ ಸಮೇತ ಬಾಲಕಿ ಶವವನ್ನು ಹೂತಿಡಲಾಗಿದೆ ಎಂಬ ಆರೋಪದ ಬಗ್ಗೆ ಆಧಾರಿತವಾಗಿ, ಮಧ್ಯಾಹ್ನ 1 ಗಂಟೆಯಿಂದ ಸಂಜೆ 5.50 ರವರೆಗೆ ಶೋಧ ನಡೆಯಿತು. ಆದರೆ, ಈ ಜಾಗದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಧರ್ಮಸ್ಥಳ | ಯೂಟ್ಯೂಬರ್‌ಗಳ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಪ್ರೆಸ್ ಕ್ಲಬ್ ಕೌನ್ಸಿಲ್ ಆಗ್ರಹ
ದೂರುದಾರ ಮೊದಲ ದಿನ ನೇತ್ರಾವತಿ ಸ್ನಾನ ಘಟ್ಟದ ಬಯಲಿನಲ್ಲಿ ತೋರಿಸಿದ್ದ 13ನೇ ಜಾಗದಲ್ಲಿ ಶೋಧ ಕಾರ್ಯ ಬಾಕಿ ಇದೆ. ಅಲ್ಲಿ ನೆಲ ಅಗೆಯುವ ಕಾರ್ಯ ಶುಕ್ರವಾರವೂ ನಡೆದಿಲ್ಲ.
ದೂರುದಾರ ಮೊದಲ ದಿನ ತೋರಿಸಿದ್ದ 13 ಜಾಗ ಹಾಗೂ ಅ ಬಳಿಕ ತೋರಿಸಿದ್ದ ಎರಡು ಜಾಗಗಳ ಪೈಕಿ ಇದುವರೆಗೆ 14 ಕಡೆ ಕಾಡಿನೊಳಗೆ ಶೋಧ ನಡೆಸಲಾಗಿದೆ. ದೂರುದಾರನ್ನು ನೇತ್ರಾವತಿ ನದಿ ಪಕ್ಕದ ಬಂಗ್ಲೆಗುಡ್ಡೆಯಲ್ಲಿ ತೋರಿಸಿದ್ದ 6ನೇ ಪಾಯಿಂಟ್‌ನಲ್ಲಿ ನೆಲದಡಿ ಮೃತದೇಹದ ಅವಶೇಷ ಪತ್ತೆಯಾಗಿದ್ದರೆ, ಆತ ಕಾಡಿನೊಳಗೆ ತೋರಿಸಿದ್ದ, ಗುರುತು ಮಾಡದ ಇನ್ನೊಂದು ಜಾಗದಲ್ಲಿ ಮೃತದೇಹದ ತಲೆಬುರುಡೆ, ಬೆನ್ನುಮೂಳೆ ಸೇರಿದಂತೆ 100ಕ್ಕೂ ಹೆಚ್ಚು ಮೂಳೆಗಳು ಸಿಕ್ಕಿದ್ದವು. ಇನ್ನೂ ಉಳಿದ 12 ಜಾಗಗಳಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.
ತನಿಖೆಗೆ ಹೊಸ ತಿರುವು
ಇದೇ ವೇಳೆ, ಇಚಿಲಂಪಾಡಿಯ ನಿವಾಸಿ ಜಯಂತ್ ಟಿ. ಎಂಬವರು ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು ಗಮನಾರ್ಹ. ಈ ಹಿಂದೆ ಅವರು ಧರ್ಮಸ್ಥಳದಲ್ಲಿ ಶವವನ್ನು ಹೂತು ಹಾಕುತ್ತಿರುವುದನ್ನು ನೋಡಿದ್ದೇನೆ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಅವರಿಗೆ ಎಸ್‌ಐಟಿ ಅಧಿಕಾರಿಗಳಿಂದ ಕಚೇರಿಗೆ ಬಂದು ಮಾಹಿತಿ ನೀಡುವಂತೆ ತಿಳಿಸಿದರು. ಅದರಂತೆ ಇಂದು ಅಧಿಕಾರಿಗಳು ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ಜುಲೈ 4ರಂದು ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
