ಅಮಾಯಕ ಯುವಕನೊಬ್ಬ ತನ್ನ ವಿನೂತನ ಶೈಲಿಯ ‘ಶ್ರೇಡೆಡ್ ಪ್ಯಾಂಟ್’ ಧರಿಸಿ ಮಾರುಕಟ್ಟೆಗೆ ಹೋದಾಗ ಮೂವರು ಪುಂಡರು ಆತನನ್ನು ತಡೆದು ನಿಲ್ಲಿಸಿದ್ದಲ್ಲದೇ, ಆತನ ಎರಡೂ ಕೈಗಳನ್ನು ಬಲವಂತವಾಗಿ ಹಿಡಿದು ಪ್ಯಾಂಟಿಗೆ ಗೋಣಿಚೀಲದ ಸೂಜಿಯಿಂದ ಹೊಲಿಗೆ ಹಾಕಿದ್ದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ವೈರಲ್ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ವಿಡಿಯೋ ವೈರಲಾದ್ದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗುರುವಾರ ರಾತ್ರಿ ಸಂಬಂಧಿಕರ ಮನೆಗೆ ತೆರಳಿದ್ದ ಯುವಕ, ಶೌಚಾಲಯದಲ್ಲಿದ್ದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹನೀಫ್ ಎಂಬುವವರ ಪುತ್ರ ಶಾಹಿಲ್ (22) ಎಂಬ ಯುವಕ ಈವಾಗಿನ ನವೀನ ಮಾದರಿಯ ಪ್ಯಾಂಟ್ ಧರಿಸಿ ನ.21ರಂದು ಮಧ್ಯಾಹ್ನ ಬೆಳ್ತಂಗಡಿಯ ಸಂತೆಕಟ್ಟೆ ಮಾರುಕಟ್ಟೆಯಲ್ಲಿರುವ ಅಂಗಡಿಯ ಕೆಲಸಕ್ಕೆಂದು ಬಂದಿದ್ದ.
ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಸಾರ್ವಜನಿಕವಾಗಿ ಆತನ ಕೈಗಳನ್ನು ಬಲವಂತದಿಂದ ಹಿಡಿದಿಟ್ಟು, ಆತನ ಪ್ಯಾಂಟನ್ನು ಗೋಣಿ ಚೀಲಕ್ಕೆ ಹೊಲಿಗೆ ಹಾಕುವ ಸೂಜಿಯಿಂದ ಯುವ ಹೊಲಿಗೆ ಹಾಕಿದ್ದಾರೆ. ಜೊತೆಗೆ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದರು.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್ (ಜೈಭಾರತ್), ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಮಗನಾದ ಬಾಬ್ ಜಾನ್ ಸಾಹೇಬ್ ಎಂಬವರು ಸೇರಿ ಈ ದುಷ್ಕೃತ್ಯ ನಡೆಸಿದವರು ಎಂದು ತಿಳಿದು ಬಂದಿದೆ.
ಯುವಕನೊಬ್ಬ ವಿನೂತನ ಶೈಲಿಯ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂರು ಜನರ ಪುಂಡರ ಗುಂಪು ಆತನನ್ನು ತಡೆದು ನಿಲ್ಲಿಸಿದ್ದಲ್ಲದೇ, ಆತನ ಎರಡೂ ಕೈಗಳನ್ನು ಬಲವಂತವಾಗಿ ಹಿಡಿದು ಪ್ಯಾಂಟಿಗೆ ಗೋಣಿಚೀಲದ ಸೂಜಿಯಿಂದ ಹೊಲಿಗೆ ಹಾಕಿ, ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. pic.twitter.com/f7SEaxR3qL
— Irshad Venur ಇರ್ಷಾದ್ ವೇಣೂರು (@muhammadirshad6) November 22, 2024
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಯುವಕ ಶಾಹಿಲ್ ನ. 21 ರಂದು ರಾತ್ರಿ 8.30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿ, ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತುಂಬಾ ಹೊತ್ತಾದರೂ, ಶೌಚಾಲಯದಿಂದ ಹೊರಬಾರದ್ದನ್ನು ಗಮನಿಸಿದ ಕುಟುಂಬದ ಸದಸ್ಯರು, ಬಾಗಿಲನ್ನು ಒಡೆದು ಒಳಹೋದಾಗ, ಪ್ರಜ್ಞೆ ತಪ್ಪಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಚಿಕಿತ್ಸೆಗಾಗಿ ಮನೆಯವರು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಥಮ ಚಿಕಿತ್ಸೆಯ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಿನಾಯಿಲ್ ಕುಡಿದ ಪರಿಣಾಮ ಯುವಕನ ಗಂಟಲಿಗೆ ಸೋಂಕು(Infection) ಉಂಟಾಗಿದ್ದು, ವೈದ್ಯರು ಯುವಕನ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿದ್ದೀರಾ? ಕೆ ಆರ್ ಪೇಟೆ | ಚಡ್ಡಿ ಗ್ಯಾಂಗ್ ಮಾದರಿಯಲ್ಲೇ ಮಾರಕಾಸ್ತ್ರ ಹಿಡಿದು ದರೋಡೆಗೆ ಯತ್ನ?
ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಯುವಕನ ತಂದೆ ಮುಹಮ್ಮದ್ ಹನೀಫ್, “ಪ್ಯಾಂಟಿಗೆ ಹೊಲಿಗೆ ಹಾಕಿದ್ದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ, ಹರಿಯಬಿಟ್ಟಿದ್ದಾರೆ. ಅದು ವಾಟ್ಸಪ್ ಸೇರಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದು ಗೊತ್ತಾಗಿ ಮಗ ಮನನೊಂದಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ್ಮಹತ್ಯೆಗೆ ಸಂಬಂಧಿಸಿದ ಕಾರಣ ವೆನ್ಲಾಕ್ ಆಸ್ಪತ್ರೆಗೆ ಮಂಗಳೂರಿನ ಬೀಟ್ ಪೊಲೀಸರು ಬಂದು, ಮಾಹಿತಿ ಪಡೆದುಕೊಂಡಿದ್ದಾರೆ. ನಾವು ಪ್ರಕರಣ ದಾಖಲಿಸಿಲ್ಲ” ಎಂದು ತಿಳಿಸಿದ್ದಾರೆ.
“ನನ್ನ ಮಗ ಸಾಧು ಸ್ವಭಾವದವ. ವಿಡಿಯೋ ವೈರಲ್ ಆಗಿದ್ದರಿಂದ ಮನನೊಂದು ಈ ನಿರ್ಧಾರ ಮಾಡಿದ್ದಾನೆ. ಸಿಕ್ಕ ಮಾಹಿತಿಯ ಪ್ರಕಾರ, ಇದರಲ್ಲಿ ಭಾಗಿಯಾದವರೆಲ್ಲರಿಗೂ ಮದುವೆಯಾಗಿ, ಮಕ್ಕಳಿರುವವರು. ಅವರ ಮಕ್ಕಳಿಗೆ ಹೀಗೆ ಯಾರಾದರೂ ಮಾಡಿದ್ದಿದ್ದರೆ ಏನಾಗುತ್ತಿತ್ತು? ಮಕ್ಕಳು ಏನಾದರೂ ತಪ್ಪು ಮಾಡಿದಾಗ ಬುದ್ಧಿವಾದ ಹೇಳಿ ಸರಿ ಮಾಡಬೇಕೇ ಹೊರತು, ಈ ರೀತಿಯ ನಡೆದುಕೊಂಡು, ವಿಡಿಯೋ ಹರಿಯಬಿಡುವುದು ಸರಿಯಲ್ಲ. ಸದ್ಯ ಮಗ ಐಸಿಯುವಿನಲ್ಲಿದ್ದಾನೆ. ಫಿನಾಯಿಲ್ ಕುಡಿದಿದ್ದರಿಂದ ಹೊಟ್ಟೆಯೊಳಗೆ ಏನಾದರೂ ಸಮಸ್ಯೆಯಾಗಿದೆಯೇ ಇದೆ ಎಂಬುದನ್ನು ವೈದ್ಯರು ಪರೀಕ್ಷೆ ಮಾಡಿದ್ದಾರೆ. ವರದಿ ಬರಬೇಕಷ್ಟೆ. ಬಂದ ಬಳಿಕ ತಿಳಿಸುತ್ತೇನೆ ಎಂದು ವೈದ್ಯರು ಕೂಡ ಹೇಳಿದ್ದಾರೆ. ಆತನ ಪ್ರಾಣಕ್ಕೆ ಏನೂ ಆಗದಿರಲಿ ಎಂಬುದಷ್ಟೇ ನನ್ನ ಪ್ರಾರ್ಥನೆ” ಎಂದು ಯುವಕನ ತಂದೆ ಹನೀಫ್ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆ ಮಾಡಿದಾಗ, “ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ದೂರು ಇನ್ನೂ ದಾಖಲಾಗಿಲ್ಲ” ಎಂದು ಮಾಹಿತಿ ನೀಡಿದ್ದಾರೆ.
ಸಹೋದರನಿಗೆ ಕರೆ ಮಾಡಿ, ‘ನನ್ನನ್ನು ಹುಡುಕಬೇಡಿ’ ಎಂದಿದ್ದ!
ವಿಡಿಯೋ ವೈರಲಾದ ಬಳಿಕ ಶಾಹಿಲ್‌ನ ಸ್ನೇಹಿತರು ಸೇರಿ ಹಲವು ಮಂದಿ ಆತನಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಬಳಿಕ ತನ್ನ ಸಹೋದರನಿಗೆ ಕರೆ ಮಾಡಿ, “ನಾನು ಬಳಸುತ್ತಿರುವ ಬೈಕ್ ಬೆಳ್ತಂಗಡಿ ಬಳಿ ಇಟ್ಟಿದ್ದೇನೆ. ನೀನು ಉಪಯೋಗಿಸಿಕೊಳ್ಳು. ನನ್ನನ್ನು ಇನ್ಮುಂದೆ ಹುಡುಕಬೇಡಿ” ಎಂದಿದ್ದ.
ಇದರಿಂದ ಗಾಬರಿಗೊಂಡ ಸಹೋದರ, ಕೂಡಲೇ ಕುಟುಂಬದ ಹಿರಿಯರಿಗೆ ಮಾಹಿತಿ ನೀಡಿದ್ದಾನೆ. ಆ ಬಳಿಕ ಆತನನ್ನು ಸಂಬಂಧಿಕರು ವಿಚಾರ ತಿಳಿದುಕೊಳ್ಳಲು ಮನೆಗೆ ಕರೆಸಿಕೊಂಡಿದ್ದರು. ಅವರ ಮನೆಯಲ್ಲಿಯೇ ಫಿನಾಯಿಲ್ ಕುಡಿದಿರುವುದಾಗಿ ತಿಳಿದು ಬಂದಿದೆ.
