ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಡಾನೆಗಳನ್ನು ಹಿಡಿಯಲು ಇಲಾಖೆಯ ಸಿಬ್ಬಂದಿಗಳು ಕಸರತ್ತು ನಡೆಸುತ್ತಿದ್ದಾರೆ. ಆದರೂ, ಕಾಡಾನೆಗಳ ಹಾವಳಿ ಮುಂದುವರೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಕಾರ್ಮಿಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ನಡೆದಿದೆ.
ಗುರುವಾರ ಸಂಜೆ ಕಾಫಿ ತೋಟದಲ್ಲಿ ಕೆಲಸ ಮುಗಿಸಿ, ಮನೆಗೆ ಮರಳುವ ವೇಳೆ ಕಾಡಾನೆ ದಾಳಿ ಮಾಡಿದೆ. ಸ್ಥಳದಲ್ಲೇ ಕಾರ್ಮಿಕ ವಸಂತ್ ಮೃತಪಟ್ಟಿದ್ದಾರೆ. ಅವರೊಂದಿಗಿದ್ದ ಆತನ ಸ್ನೇಹಿತ ಪ್ರಾಣಾಪಾಯದಿಂದ ಬಜಾವಾಗಿದ್ದಾರೆ. ಕಾಡಾನೆಗಳ ದಾಳಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಧರಣ ನಡೆಸುತ್ತಿದ್ದಾರೆ.
“ಮನೆಯಿಂದ ಹೊರಹೋದವರು ಮರಳಿ ಬರುವುದೇ ಗ್ಯಾರಂಟಿ ಇಲ್ಲದಂತಾಗಿದೆ. ಯಾರಾದರು ಸಾವನ್ನಪ್ಪಿದರೆ, ಪರಿಹಾರವಾಗಿ ಹಣ ಕೊಡುತ್ತೀರಿ. ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು” ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯ ಮಲೆನಾಡು ಪ್ರದೇಶವಾದ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ನಿರಂತವಾಗಿದೆ. ಕಳೆದ ತಿಂಗಳು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಕೂಡ ಮೃತಪಟ್ಟಿದೆ.