ಮಾನವ ಹಕ್ಕುಗಳ ಕಾನೂನು ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತಿರುವ ಎಪಿಸಿಆರ್ (ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್)ನ ಕರ್ನಾಟಕ ರಾಜ್ಯ ಶಾಖೆಯ ಹೊಸ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆಯಾಯಿತು. ಸೇವಾ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಸುಭಾಷ್ ಭರಣಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಸುಭಾಷ್ ಭರಣಿ ತಮ್ಮ ಮುಖ್ಯ ಭಾಷಣದಲ್ಲಿ, “ಸಮಾಜದಲ್ಲಿ ಮಾನವೀಯತೆ ನಶಿಸಿ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಕರುಣೆ ಮತ್ತು ಒಗ್ಗಟ್ಟನ್ನು ಮರುಸ್ಥಾಪಿಸಲು ಸಾಮೂಹಿಕ ಕ್ರಿಯೆಯ ಅಗತ್ಯವಿದೆ. ಮೌನ ಮತ್ತು ನಿಷ್ಕ್ರಿಯತೆ ತುಂಬಾ ಅಪಾಯಕಾರಿ. ಮಾನವ ಹಕ್ಕುಗಳು ಮತ್ತು ಸಂವಿಧಾನದ ರಕ್ಷಣೆಗಾಗಿ ನಾವೆಲ್ಲ ಒಗ್ಗಟ್ಟಿನಿಂದ ಕಾರ್ಯ ಪರ್ವತರಾಗುವುದು ಕಾಲದ ತುರ್ತು ಅಗತ್ಯವಾಗಿದೆ” ಎಂದು ಎಚ್ಚರಿಸಿದರು.
ಎಪಿಸಿಆರ್ ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, “ಇಂದಿನ ಜಗತ್ತಿನಲ್ಲಿ ಸಾಂವಿಧಾನಿಕ ಹಕ್ಕುಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಎಪಿಸಿಆರ್‌ನ ಅಗತ್ಯವಿದೆ. ದಮನಿತರು ಮತ್ತು ಶೋಷಿತರ ಹಕ್ಕುಗಳ ಸಂರಕ್ಷಣೆಯ ಕೆಲಸಗಳಲ್ಲಿ ಕಾರ್ಯ ಪರ್ವತರಾಗಿ ಎಪಿಸಿಆರ್‌ನ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು” ಕರೆ ನೀಡಿದರು.

ಇದನ್ನೂ ಓದಿ: ಬೆಂಗಳೂರು | 400 ಮರಗಳ ಮಾರಣಹೋಮಕ್ಕೆ ರೈಲ್ವೆ ಸಿದ್ಧತೆ; ಪರಿಸರವಾದಿಗಳ ಆಕ್ರೋಶ
ಕಾರ್ಯಕ್ರಮದಲ್ಲಿ ಎಪಿಸಿಆರ್ ರಾಷ್ಟ್ರೀಯ ಉಪಾಧ್ಯಕ್ಷ ವಕೀಲ ಪಿ. ಉಸ್ಮಾನ್, ಹುಲಗಪ್ಪ ಕಟ್ಟಿ ಮನೆ (ಸ್ಪಂದನ ಸಂಸ್ಥೆ, ಮೈಸೂರು), ನಿವೃತ್ತ ಡಿಸಿಎಫ್ ಎಂ.ಆರ್. ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಚಿದಾನಂದ, ವಕೀಲೆ ಅಖಿಲಾ, ಹೈಕೋರ್ಟ್ ವಕೀಲ ಪಿ. ಉಸ್ಮಾನ್, ಜೆರಾಲ್ಡ್ ಡಿಸೋಜಾ, ವಕೀಲ ಬಿ.ಟಿ. ವೆಂಕಟೇಶ್, ಮಾವಳ್ಳಿ ಶಂಕರ್, ಎ.ಜಿ. ಕೈಸರ್, ಮಲ್ಲಿಗೆ, ಮಾಜಿ ಕೆಎಸ್ ಅಧಿಕಾರಿ ಖಾಲಿದ್, ಹರ್ಷವರ್ಧನ್ ಉಮ್ರೆ, ಎಂ. ಕುನ್ಹಿ, ಹುಸೇನ್, ಶಾಜೀಹಾ, ಮೆಹದಿ ಕಲೀಂ, ವಕೀಲ ಸಯೀದ್ ಅಕ್ಮಲ್ ರಜ್ವಿ, ಶೇಖ್ ಶಫಿ, ವಕೀಲ ಮಾನ್ವಿ, ವಕೀಲೆ ಮೈತ್ರಿ ಸೇರಿದಂತೆ ನಗರದ ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರು, ಖ್ಯಾತ ವಕೀಲರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.