ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಆಯಾ ನಗರ ಪಾಲಿಕೆಗಳಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಇಂದು ವರ್ಚ್ಯುವಲ್ ಮೂಲಕ 5 ನಗರ ಪಾಲಿಕೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಐದು ನಗರ ಪಾಲಿಕೆಗಳಿಗೆ ತಲಾ 25 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದ್ದು, ಆ ಅನುದಾನದಲ್ಲಿಯೇ ಹಣವನ್ನು ಹೊಂದಿಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು” ಎಂದು ಸೂಚನೆ ನೀಡಿದರು.
“ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಷ್ಟು ರಸ್ತೆಗಳು ಬರಲಿವೆ. ರಸ್ತೆ ಗುಂಡಿಗಳ ಸಂಖ್ಯೆ, ಗುತ್ತಿಗೆದಾರರನ್ನು ನಿಯೋಜಿಸಿರುವ, ರಸ್ತೆ ಗುಂಡಿಗಳನ್ನು ಮುಚ್ಚಲು ತಗಲುವ ವೆಚ್ಚ, ಕೆಲಸ ಕೈಗೊಳ್ಳುವ ಮಾದರಿಯ ಕುರಿತು ವಿವರಣಾತ್ಮಕ ವರದಿ ನೀಡಬೇಕು” ಎಂದು ತಿಳಿಸಿದರು.
“ನಗರದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಇದೇ ಶುಕ್ರವಾರದಿಂದ ಪರಿಣಾಮಕಾರಿಯಾಗಿ ಗುಣಮಟ್ಟವನ್ನು ಕಾಪಾಡಿಕೊಂಡು ಗುಂಡಿಗಳನ್ನು ಮುಚ್ಚಬೇಕು” ಎಂದು ಸೂಚನೆ ನೀಡಿದರು.
ಇಂಡೆಂಟ್ ನೀಡಿ ಡಾಂಬರು ಪಡೆಯಿರಿ
“ನಗರದಲ್ಲಿ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿನ ಗುಂಡಿಗಳು ಹಾಗೂ ಹಾಳಾದ ಭಾಗಗಳಿಗೆ ಡಾಂಬರೀಕರಣ ಮಾಡಲು ಡಾಂಬರು ಮಿಶ್ರಣ ಘಟಕದಿಂದ ಅವಶ್ಯಕ ಡಾಂಬರನ್ನು ಪಡೆದು ಕಾಲಮಿತಿಯೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಈ ಸಂಬಂಧ ಉತ್ತರ ನಗರ ಪಾಲಿಕೆಯಿಂದ ಘಟಕಕ್ಕೆ ನೋಡಲ್ ಅಧಿಕಾರಿಯನ್ನು ನಿಯೋಜಿಸಿ, ಆಯಾ ಪಾಲಿಕೆಗಳಿಂದ ಅವಶ್ಯಕತೆಗೆ ಅನುಸಾರ ಇಂಡೆಂಟ್ ಸಲ್ಲಿಸಿ, ಗುತ್ತಿಗೆದಾರರಿಂದ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸೆ.20ರಂದು ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ
ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೆಂದ್ರ ಚೋಳನ್ ಮಾತನಾಡಿ, “ಕೇಂದ್ರ ನಗರ ಪಾಲಿಕೆಯಲ್ಲಿ ಈಗಾಗಲೇ ರಸ್ತೆಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ರಸ್ತೆ ಗುಂಡಿಗಳ ಸಮಗ್ರ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಅದರಂತೆ, 30ಕ್ಕೂ ಹೆಚ್ಚು ತಂಡಗಳನ್ನು ನಿಯೋಜನೆ ಮಾಡಿಕೊಂಡು, ಪ್ರತಿ ರಸ್ತೆಗೂ ಪ್ರತ್ಯೇಕ ಏಜೆನ್ಸಿಯನ್ನು ನಿಗದಿಪಡಿಸಿ, ಗಡುವನ್ನು ನೀಡಿ ಸಾಮೂಹಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು” ಎಂದು ತಿಳಿಸಿದರು.
ಈ ವೇಳೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ. ಕೆ ಹರೀಶ್ ಕುಮಾರ್, ನಗರ ಪಾಲಿಕೆಗಳ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಡಾ. ರಾಜೇಂದ್ರ ಕೆ ವಿ, ಎಲ್ಲ ಮುಖ್ಯ ಅಭಿಯಂತರರು ಸೇರಿದಂತೆ ಮತ್ತಿತರರ ಅಧಿಕಾರಿಗಳು ಇದ್ದರು.