ಹಲವು ಸರಕಾರಿ ಭೂಮಿಗಳನ್ನು ಒತ್ತುವರಿ ಮಾಡಿ, ದಲಿತರಿಗೆ ಮೀಸಲಿಟ್ಟ ಹಣವನ್ನು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ದುರುಪಯೋಗ ಮಾಡಿಕೊಂಡಿದ್ದಾರೆ. ಸರಕಾರ ಈ ಕೂಡಲೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಪುಟದಿಂದ ವಜಾಗೊಳಿಸಬೇಕು ಎಂದು ದಲಿತ ಸೇನೆ ಅಧ್ಯಕ್ಷ ಹನುಮಂತ ಜಿ.ಯಳಸಂಗಿ ಆಗ್ರಹಿಸಿದ್ದಾರೆ.
ಸೋಮವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಸರಕಾರಿ ಇಲಾಖೆಗಳ ಕಚೇರಿಗಳು ಮತ್ತು ಶಾಲೆಗಳು ಖಾಸಗಿ ಜಾಗಗಳಲ್ಲಿವೆ. ಶರಣಬಸಪ್ಪ ಮತ್ತು ಕುಟುಂಬದವರು ಸರಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅದೇ ಜಾಗಗಳಲ್ಲಿ ಸರಕಾರದ ಇಲಾಖೆಗಳಿಗೆ ಲಕ್ಷಾಂತರ ರೂಪಾಯಿಗೆ ಬಾಡಿಗೆ ನೀಡಿ ಅಕ್ರಮ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಬಡವರಿಗಾಗಿ ಮೀಸಲಿಟ್ಟ ಎರಡು ಎಕರೆ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿದ್ದಲ್ಲದೆ, ಸದರಿ ಜಮೀನಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ತಾವೇ ಮಾಲಕರಂತೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಸಚಿವರನ್ನು ಜನರು ಪ್ರಶ್ನೆ ಮಾಡಲಾಗದಂತ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ವರ್ಗಗಳ ಸಮಗ್ರ ಅಭಿವೃದ್ಧಿ ಯೋಜನೆಯ ಸರ್ವೆ ನಂ.826 ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಕೂಡ ಪಡೆದಿದ್ದು, ಅಲ್ಲಿನ ಎಲ್ಲ ಗಾರ್ಡನ್ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹನುಮಂತ ದೂರಿದರು.

ಕೊರಚ ಮತ್ತು ಕೊರಮರಿಗೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅಲ್ಲಿ ಕಟ್ಟಡ ಕಟ್ಟಲಾಗಿದೆ. ಮೂಡಾ ಹಗರಣಕ್ಕಿಂತ ದೊಡ್ಡ ಮಟ್ಟದಲ್ಲಿ ಇಲ್ಲಿ ಅಕ್ರಮ ನಡೆಯುತ್ತಿದ್ದು, ಸಚಿವರ ಕುಟುಂಬ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ‘ಪ್ಯಾಲೆಸ್ತೀನ್ ಬ್ರ್ಯಾಂಡ್’ ತಂಪು ಪೇಯಗಳು ದೈತ್ಯ ಕೋಲಾ ಕಂಪನಿಗಳಿಗೆ ಸೆಡ್ಡು ಹೊಡೆದಿವೆ!
ಯಾದಗಿರಿಯ ಯಾವೊಂದು ಸರಕಾರಿ ಸಂಸ್ಥೆಗಳಿಗೆ ಸ್ವಂತ ಜಾಗಗಳಿಲ್ಲ. ಯಾವುದಾದರೊಂದು ಸರಕಾರಿ ಜಾಗದಲ್ಲಿ ಬಡವರು ಗುಡಿಸಲು ಕಟ್ಟಿಕೊಂಡಾಗ ಅದನ್ನು ಎತ್ತಂಗಡಿ ಮಾಡಿಸಿ ಅವರು ಆಕ್ರಮಿಸಿಕೊಳ್ಳುತ್ತಾರೆ. ಎಸ್ಸಿಪಿ-ಟಿಎಸ್ಪಿ ಯೋಜನೆ ಹೆಸರಿನಲ್ಲಿ ಹಣವನ್ನು ಕಬಳಿಸಿರುವ ಶರಣಬಸಪ್ಪ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಸರಕಾರ ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕು. ಮುನಿಸಿಪಾಲಿಟಿ ಆಸ್ತಿ ಕಬಳಿಸುವಲ್ಲಿ ಸಹಕರಿಸಿದ ಶಹಾಪೂರ ಪುರಸಭೆಯ ಹಿಂದಿನ ಎಲ್ಲ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಹನುಮಂತ ಯಳಸಂಗಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇನೆಯ ಉಪಾಧ್ಯಕ್ಷರಾದ ಎಂ.ಎ.ಸಿಂದಗಿಕರ್, ಶಾಂತಪ್ಪ ಬಿ.ಸಾಲಿಮನಿ, ಝಾವ್ಹೇದ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
