ತುರುವೇಕೆರೆ ತಾಲ್ಲೂಕಿನ ಟಿ.ಬಿ.ಕ್ರಾಸ್ ಸಮೀಪದ ಎಸ್.ಬಿ.ಜಿ ವಿದ್ಯಾಲಯದ ಶಾಲಾ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಜಿಲ್ಲಾ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎಸ್.ಬಿ.ಜಿ ವಿದ್ಯಾಲಯದ ವತಿಯಿಂದ ಬೆಂಗಳೂರು ವಿಭಾಗ ಮಟ್ಟದ 2024-25ನೇ ಸಾಲಿನ 14 ರಿಂದ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾ ಕೂಟವು ಮಂಗಳವಾರ ಬೆಳಗ್ಗೆ ಪ್ರಾರಂಭಗೊಂಡಿತು.
ಕ್ರೀಡಾಕೂಟಕ್ಕೆ ತುಮಕೂರು, ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಿಂದ ಕ್ರೀಡಾ ವಿದ್ಯಾರ್ಥಿಗಳು ಆಗಮಿಸಿದ್ದರು. ಒಟ್ಟು 44 ತಂಡಗಳು ಸ್ಪರ್ಧಿಸಿದ್ದವು. 17 ನೇ ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಟಿ.ಬಿ.ಕ್ರಾಸ್‌ನ ಆದಿಚುಂಚನಗಿರಿ ಮಠದ ಎಸ್.ಬಿ.ಜಿ ವಿದ್ಯಾಲಯದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳ ತಂಡ (ದ್ವಿತೀಯ ಸ್ಥಾನ) ಪಡೆದರು. 14 ನೇ ವಯಸ್ಸಿನೊಳಗಿನ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬಾಲಕಿಯರ ತಂಡ (ದ್ವಿತೀಯ ಸ್ಥಾನ) ಪಡೆಯಿತು. ಬುಧವಾರದಂದು 14 ನೇ ವಯಸ್ಸಿನೊಳಗಿನ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿಭಾಗದಲ್ಲಿ 3 ತಂಡಗಳು ಹಾಗು 17 ನೇ ವಯೋಮಾನದ ವಿಭಾಗದಲ್ಲಿ 3 ತಂಡಗಳು ಸೈಮಿಫೈನಲ್ಸ್ ಮತ್ತು ಫೈನಲ್ಸ್ ಪಂದ್ಯಗಳನ್ನು ಆಡಲಿವೆ.
ತುರುವೇಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಮಾತನಾಡಿ ಓದು ಅಥವಾ ಕ್ರೀಡೆಗೆ ಯಾರು ಕಠಿಣ ಪರಿಶ್ರಮ ಹಾಕುತ್ತಾರೋ ಅವರು ಮಾತ್ರ ಒಳ್ಳೆಯ ಸ್ಥಾನಮಾನ ಪಡೆಯುತ್ತಾರೆ. ವಿದ್ಯಾರ್ಥಿಗಳು ಸೋಲು ಗೆಲುವಿನ ನಡುವೆ ಲೆಕ್ಕಾಚಾರ ಹಾಕದೇ ಕ್ರೀಡಾಸ್ಪೂರ್ತಿ ಮೆರೆಯಬೇಕೆಂದು ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ.ಪರಮೇಶ್ವರಪ್ಪ, ಕರ್ನಾಟಕ ಹ್ಯಾಂಡ್ ಬಾಲ್ ಸಂಘದ ಉಪಾಧ್ಯಕ್ಷ ಪ್ರೊ.ಪುಟ್ಟರಂಗಪ್ಪ, ಖಜಾಂಚಿ ಪ್ರಕಾಶ್ ನರಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿದ್ದಪ್ಪ ನಾಗಪ್ಪ ವಾಲೀಕಾರ, ಗೋಪಾಲ ಕೃಷ್ಣ, ರಮೇಶ್ ಮತ್ತಿತರರು ಇದ್ದರು.
