ಹತ್ತಾರು ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೆ ವಾಸಿಸುತ್ತಿದ್ದ ಮೂರು ವಿಧಾನಸಭಾ ಕ್ಷೇತ್ರಗಳ, ಹಕ್ಕಿಪಿಕ್ಕಿ-ಅಲೆಮಾರಿ ಸಮುದಾಯ, ಲೈಂಗಿಕ ಕಾರ್ಯಕರ್ತೆಯರ ಒಟ್ಟು 777 ಕುಟುಂಬಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರ ವಿತರಿಸಿದರು.
ಮೊದಲ ಬಾರಿಗೆ ಹಕ್ಕಿಪಿಕ್ಕಿ ಹಾಗೂ ಅಲೆಮಾರಿ ಸಮುದಾಯ, ಲೈಂಗಿಕ ಕಾರ್ಯಕರ್ತೆಯರು, ಕುಷ್ಠರೋಗದಿಂದ ಗುಣಮುಖರಾದ ಕುಟುಂಬಗಳಿಗೆ ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರ ನೀಡಿರುವುದು ವಿಶೇಷ.
ಯಶವಂತಪುರ ಕ್ಷೇತ್ರದ ಯಲಚಗುಪ್ಪೆಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 228 ಕುಟುಂಬಗಳಿಗೆ ಹಾಗೂ ಮಾದಿಗರ ಚನ್ನಯ್ಯ ಸ್ಲಂನಲ್ಲಿ 259 ಹಕ್ಕುಪತ್ರ, ಇದೇ ಗ್ರಾಮದಲ್ಲಿರುವ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಲೆಮಾರಿ ಸಮುದಾಯದ 200 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರ ನೀಡಲಾಯಿತು.

ಯಲಹಂಕ ಕ್ಷೇತ್ರದ ಗಿಡ್ಡೇನಹಳ್ಳಿ ಗ್ರಾಮದ ಬಿಕೆ ಸ್ಲಂನಲ್ಲಿ 40 ಕುಟುಂಬಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಾತಾಪುರ ದಲಿತ ಕಾಲೋನಿಯಲ್ಲಿ ಕುಷ್ಠರೊಗದಿಂದ ಗುಣಮುಖರಾದ 50 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಲಾಯಿತು.
ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಶಾಸಕ ಎಸ್ ಟಿ ಸೋಮಶೇಖರ್, ಕುಸುಮ ಹನುಮಂತರಾಯಪ್ಪ, ಸ್ಲಂ ಬೋರ್ಡ್ ಆಯುಕ್ತ ಅಶೋಕ್, ಚೀಫ್ ಎಂಜಿನಿಯರ್ ಸುದೀರ್, ತಾಂತ್ರಿಕ ಸಲಹೆಗಾರ ಬಾಲರಾಜ್, ಸ್ಥಳೀಯ ಮುಖಂಡ ಗಣೇಶ್ ಇದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಪ್ರಕರಣ; ಜೆಡಿಎಸ್ ಶಾಸಕಿ ಪುತ್ರನಿಗೆ ಬಂಧನದ ವಾರೆಂಟ್
ಯಶವಂತಪುರ ಕ್ಷೇತ್ರದ ಯಲಚಗುಪ್ಪೆ ಗ್ರಾಮದ ಮಾದಾರ ಚನ್ನಯ್ಯ ಸ್ಲಂನಲ್ಲಿ ಮನೆ ಮಂಜೂರಾತಿ ಪತ್ರ ವಿತರಿಸಿದ ಜಮೀರ್ ಅಹಮದ್ ಖಾನ್ ಅವರು ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರ ಜತೆ ಅಲ್ಲೇ ವಾಸಿಸುತ್ತಿದ್ದ ಅಲೆಮಾರಿ ಸಮುದಾಯದ ಶರಣಯ್ಯ ಎಂಬುವರ ಶೆಡ್‌ನಲ್ಲಿ ಅವರ ಕುಟುಂಬ ಸದಸ್ಯರ ಜತೆ ಊಟ ಮಾಡಿದರು.
ಶೆಡ್‌ನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆದಷ್ಟು ಶೀಘ್ರ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
“ತಮ್ಮ ಶೆಡ್‌ನಲ್ಲಿ ಸಚಿವರು ಬಂದು ಊಟ ಮಾಡಿದ್ದು ನಮ್ಮ ಭಾಗ್ಯ. ನಾವು ಮಾಡಿದ್ದ ಅಡುಗೆಯನ್ನು ಬಡಿಸುವಂತೆ ಪ್ರೀತಿಯಿಂದ ಕೇಳಿ ಊಟ ಮಾಡಿದರು. ಅವರ ಸರಳತೆಗೆ ಇದು ಸಾಕ್ಷಿ” ಎಂದು ಶರಣಯ್ಯ ಹರ್ಷ ವ್ಯಕ್ತಪಡಿಸಿದರು.