ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಬಗ್ಗೆ ಎಲ್ಲ ದಾಖಲೆಗಳಿದ್ದರೂ ಕೂಡ ಒತ್ತುವರಿ ಆರೋಪಿಸಿ ಅರಣ್ಯಾಧಿಕಾರಿಯೋರ್ವರು ಕೃಷಿಕರ ಜಮೀನಿಗೆ ಜೆಸಿಬಿ ನುಗ್ಗಿಸಿ, ಕೃಷಿಕರು ಬೆಳೆದಿದ್ದ ಬೆಳೆಯನ್ನು ಹಾಳುಗಡೆವಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರದ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಗಂಗಸಂದ್ರ ಸಮೀಪದ ಕಗ್ಗಲೀಪುರದ ನಾಲ್ವರು ರೈತರ ಜಮೀನಿಗೆ ಕಗ್ಗಲೀಪುರ ವಲಯ ಅರಣ್ಯಾಧಿಕಾರಿಯಾಗಿರುವ ಗೋವಿಂದರಾಜು ಎಂಬುವವರು ಏಕಾಏಕಿ ಜೆಸಿಬಿ ನುಗ್ಗಿಸಿ, ಬೆಳೆ ಹಾನಿಗೈದಿರುವುದಾಗಿ ಈ ದಿನ.ಕಾಮ್‌ಗೆ ರೈತರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ದಯಾನಂದ್ ಅವರಿಗೂ ಕೂಡ ದೂರು ನೀಡಿದ್ದಾರೆ.
ಗಂಗಸಂದ್ರದ ನಾಲ್ವರು ರೈತರಾಗಿರುವ ಹಾಗೂ ದಲಿತ ಸಮುದಾಯಕ್ಕೆ ಸೇರಿದ ಎಂ ರಮೇಶ್, ಶಿವಮ್ಮ, ವರಲಕ್ಷ್ಮೀ ಹಾಗೂ ಸಿದ್ದಪ್ಪ ಎಂಬುವವರ ಜಮೀನಿಗೆ ಜೆಸಿಬಿ ನುಗ್ಗಿಸಿರುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ರೈತ ಎಂ ರಮೇಶ್, “ಸರ್ವೆ ನಂಬರ್ 40ರಲ್ಲಿ ಸುಮಾರು 8 ಎಕರೆ ಬಡವರಿಗೆ ಆಗಿರುವ ಜಾಗವಿದೆ. ನಮ್ಮ ಜಮೀನಿನ ಬಗ್ಗೆ ಸರ್ಕಾರವೇ ನೀಡಿರುವ ದಾಖಲೆಗಳಿವೆ. ಆದರೂ ಕೂಡ ಒತ್ತುವರಿ ಆರೋಪಿಸಿ ಕಗ್ಗಲೀಪುರ ಅರಣ್ಯಾಧಿಕಾರಿಗಳು ನಮ್ಮ ಜಮೀನಿಗೆ ಜೆಸಿಬಿ ನುಗ್ಗಿಸಿ, ನಮ್ಮ ಬೆಳೆಗಳನ್ನು ಹಾಳುಗಡೆವಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಯಾರದೋ ಮಾತು ಕೇಳಿಕೊಂಡು ಈ ರೀತಿ ನಡೆದುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕಳೆದ ಒಂದು ತಿಂಗಳಿನಿಂದ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನ ಸೇರಿದಂತೆ ಎಸ್‌ಪಿ, ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ದೂರು ಕೊಟ್ಟಿದ್ದೇವೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಇನ್ನೂ ಜಂಟಿ ಸರ್ವೆ ನಡೆಸಿಲ್ಲ. 2005ರಿಂದಲೇ ನಮ್ಮದು ಹಿಡುವಳಿ ಜಾಗ ಅಂತ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ, ದಾಖಲೆ ನೀಡಿದ್ದಾರೆ. ಎಲ್ಲರಿಗೂ ನಕ್ಷೆ, ಪಹಣಿ, ಕಂಪ್ಯೂಟರ್ ಪಹಣಿ ಇದ್ದರೂ ಕೂಡ ಯಾವುದೇ ಮುನ್ಸೂಚನೆ ನೀಡದೆ, ನಮ್ಮ ಜಮೀನುಗಳಿಗೆ ಅರಣ್ಯ ಇಲಾಖೆಯವರು ಜೆಸಿಬಿ ನುಗ್ಗಿಸಿದ್ದಾರೆ. ಇದರಿಂದ ನಾವು ಬೆಳೆದಿದ್ದ ಹುರುಳಿಕಾಳು, ಅವರೆ ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಈ ಸಂಬಂಧ ಮತ್ತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ಜೊತೆಗೆ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಜಮೀನನ್ನು ನಾವು ಬಿಡುವುದಿಲ್ಲ” ಎಂದು ರೈತ ಎಂ ರಮೇಶ್ ತಿಳಿಸಿದ್ದಾರೆ.
“ನಮ್ಮ ತಾತನ ಕಾಲದಿಂದಲೂ ಉಳುಮೆ ಮಾಡುತ್ತಿದ್ದೇವೆ. ಏಕಾಏಕಿ ಅರಣ್ಯ ಇಲಾಖೆಯವರು ನಮ್ಮ ಜಮೀನಿಗೆ ಜೆಸಿಬಿ ನುಗ್ಗಿಸುವ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೀತಿದ್ದಾರೆ. ನಮ್ಮ ಹೊಲಕ್ಕೂ ಹೋಗಲು ಬಿಡುತ್ತಿಲ್ಲ. ಎಲ್ಲ ಕಡೆ ಓಡಾಡಿದರೂ ನಮಗೆ ನ್ಯಾಯ ಸಿಕ್ಕಿಲ್ಲ” ಎಂದು ಸಂತ್ರಸ್ತೆ ವರಲಕ್ಷ್ಮೀ ಈ ದಿನ.ಕಾಮ್ ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತೆ ರೈತ ಮಹಿಳೆ ಶಿವಮ್ಮ ಮಾತನಾಡಿ, “ನಮಗೆ ಅರಣ್ಯ ಇಲಾಖೆಯವರು ಕೊಡಬಾರದ ಕಷ್ಟ ಕೊಡ್ತಿದ್ದಾರೆ. ನಾವು ಕೃಷಿ ಮಾಡುತ್ತಿದ್ದರಿಂದಲೇ ನಮಗೆ ಸರ್ಕಾರ ದಾಖಲೆ ನೀಡಿದೆ. ಈಗ ಅರಣ್ಯ ಇಲಾಖೆಯವರು ಒತ್ತುವರಿ ಆರೋಪಿಸಿ ಜಮೀನಿಗೆ ಜೆಸಿಬಿ ನುಗ್ಗಿಸಿ, ಗುಂಡಿ ತೋಡಿಸಿದ್ದಾರೆ. ಯಾವುದೇ ಕೋರ್ಟಿಗೆ ಹೋದರೂ, ನಮ್ಮ ಜಮೀನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದ್ದಾರೆ.

“ಕಗ್ಗಲೀಪುರ ಅರಣ್ಯ ಇಲಾಖೆಯ ಅಧಿಕಾರಿಗಳು ನಾವು ಬೆಳೆದಿದ್ದ ಎಳ್ಳು, ಅಲಸಂಡೆ, ತೊಗರಿ ಗಿಡಗಳ ಮೇಲೆ ರಾತ್ರೋರಾತ್ರಿ ಜೆಸಿಬಿ ನುಗ್ಗಿಸವ್ರೆ. ಗುಂಡಿ ತೋಡಿಸವ್ರೆ. ನಮಗೆ ಇಲ್ಲದ ಕಷ್ಟ ಕೊಡ್ತವ್ರೆ. ಎಷ್ಟೇ ಹೇಳಿದ್ರೂ ಕೇಳಲ್ಲ” ಎಂದು ಸಂತ್ರಸ್ತ ರೈತ ಸಿದ್ದಪ್ಪ ತಮ್ಮ ನೋವು ತೋಡಿಕೊಂಡಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಪತ್ರ
ಇನ್ನು ಈ ಬೆಳವಣಿಗೆಗೆ ಸಂಬಂಧಿಸಿ ಸಂತ್ರಸ್ತರು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ದಯಾನಂದ್ ಅವರಿಗೆ ಕೂಡ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಅವರು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಈ ನಿರ್ದೇಶನದಲ್ಲಿ, ಕಗ್ಗಲೀಪುರ ಗ್ರಾಮದ ಸರ್ವೆ ನಂ. 40 ಮತ್ತು 24ರಲ್ಲಿ ಸಂತ್ರಸ್ತರು ಸುಮಾರು 100 ರಿಂದ 120 ವರ್ಷಗಳಿಂದ ವಾಸವಾಗಿದ್ದಾರೆ. ಬಗರ್‌ಹುಕುಂ ಸಾಗುವಳಿ ಮಾಡುತ್ತಾ ಬಂದಿದ್ದು, ಕಂದಾಯ ಇಲಾಖೆಯಿಂದ ಗಣಕೀಕೃತ ಪಹಣಿ, ಎಂ.ಆರ್. ನಕ್ಷೆ ಮತ್ತು ಸಾಗುವಳಿ ಚೀಟಿಯನ್ನು ಕೊಡಲಾಗಿದೆ. ಅದೇ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಏಕಾಏಕಿ ಬಂದು ಜಮೀನಿನಲ್ಲಿ ಬೆಳೆದಿರುವ ಎಳ್ಳು, ತೊಗರಿ, ಅಲಸಂದೆ, ಮುಂತಾದ ಬೆಳೆಗಳನ್ನು ನಾಶ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ. ಆದ್ದರಿಂದ, ಇದರ ಬಗ್ಗೆ ಸ್ಥಳೀಯ ಅರಣ ಇಲಾಖೆಯ ಅಧಿಕಾರಿಗಳನ್ನು ಸಂರ್ಪಕಿಸಿಕೊಂಡು, ದೂರಿನಲ್ಲಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಪರಿಶೀಲಿಸಬೇಕು. ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ನೇರವಾಗಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

ರೈತರ ವಿರುದ್ಧವೇ ದೂರು ನೀಡಿದ ಅರಣ್ಯ ಇಲಾಖೆ!
ಈ ನಡುವೆ ಸಂತ್ರಸ್ತ ರೈತರ ವಿರುದ್ಧವೇ ಕಗ್ಗಲೀಪುರ ಅರಣ್ಯ ಇಲಾಖೆಯವರು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಕಗ್ಗಲೀಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, “ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ 100 ಗಿಡಗಳನ್ನು ಕಿತ್ತು ಹಾಕಿದ್ದು, ಸರ್ಕಾರಿ ಸೊತ್ತುಗಳನ್ನು ಹಾಳುಗೆಡವಿದ್ದಾರೆ. ಈ ಸಂಬಂಧ ಸೂಖ್ತ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.