ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬರೋಬ್ಬರಿ 100 ಬೈಕ್ ಕಳ್ಳತನ ಮಾಡಿರುವ ಖತರ್ನಾಕ್ ಖದೀಮನನ್ನ ಬೆಂಗಳೂರು ನಗರದ ಕೆ.ಆರ್ ಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ, ಆಂಧ್ರಪ್ರದೇಶದ ಬಂಗಾರುಪಾಳ್ಯಂ ನಿವಾಸಿ ಪ್ರಸಾದ್ ಬಾಬು ಬಂಧಿತ ಆರೋಪಿ. ಬಂಧಿತನಿಂದ ಸುಮಾರು 1.45 ಕೋಟಿ ರೂ. ಮೌಲ್ಯದ 100 ಬೈಕ್ ವಶಕ್ಕೆ ಪಡೆಯಲಾಗಿದೆ. ದುಬಾರಿ ಬೆಲೆಯ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಭೇದಿಸಿರುವ ಅಪರೂಪದ ಪ್ರಕರಣ” ಎಂದು ತಿಳಿಸಿದ್ದಾರೆ.
During today's weekly press briefing, @CPBlr spoke about various cases solved by the city police. KR Puram Police have apprehended an inter-state offender involved in multiple two-wheeler thefts across Karnataka, Andhra Pradesh, Tamil Nadu, and Telangana, leading to the recovery… pic.twitter.com/ym0o1U7qTH
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) February 28, 2025
ಪ್ರಸಾದ್ ಬಾಬು ಮೆಕ್ಯಾನಿಕ್ ವೃತ್ತಿ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ಪ್ರತಿ ದಿನ ಸಂಜೆ ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ. ನಂತರ ಕೆಆರ್ ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಟ ನಡೆಸಿ, ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಈತನ ಬಂಧನದಿಂದಾಗಿ ಕೆ ಆರ್ ಪುರ ಪೊಲೀಸ್ ಠಾಣೆಯದ್ದೇ ಸುಮಾರು 23 ಪ್ರಕರಣ ಬೆಳಕಿಗೆ ಬಂದಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಈ ಪ್ರಕರಣದ ಆರೋಪಿಯ ಬಂಧನದಿಂದ ಕೆ.ಆರ್ ಪುರ ಪೊಲೀಸ್ ಠಾಣೆಯ 23 ದ್ವಿ-ಚಕ್ರ ವಾಹನ ಕಳವು ಪ್ರಕರಣವಲ್ಲದೇ, ರಾಮಮೂರ್ತಿ ಪೊಲೀಸ್ ಠಾಣೆಯ-2, ಅವಲಹಳ್ಳಿ ಪೊಲೀಸ್ ಠಾಣೆಯ-1, ಕೋಲಾರ ಟೌನ್ ಪೊಲೀಸ್ ಠಾಣೆಯ-1, ತಿರುಪತಿ ವೆಸ್ಟ್ ಪೊಲೀಸ್ ಠಾಣೆಯ-2, ತಿರುಪತಿ ಈಸ್ಟ್ ಪೊಲೀಸ್ ಠಾಣೆಯ-11, ರೆನುಗೊಂಟ ಪೊಲೀಸ್ ಠಾಣೆಯ-3, ರಾಯಚೂಟಿ ಪೊಲೀಸ್ ಠಾಣೆಯ-1, ತಿರುಚನಾನಗರ ಪೊಲೀಸ್ ಠಾಣೆ-1, ಮುತ್ಯಾಲಪಲ್ಲಿ ಪೊಲೀಸ್ ಠಾಣೆಯ-3, ನವಾಬ್ ಪೇಟ ಪೊಲೀಸ್ ಠಾಣೆಯ-1, ನಾಯ್ಡು ಪೇಟೆ ಪೊಲೀಸ್ ಠಾಣೆಯ-1, ಅಲಿಪಿರಿ ಪೊಲೀಸ್ ಠಾಣೆಯ-1 ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 51 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 49 ದ್ವಿ-ಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
ಬೆಂಗಳೂರು, ತಿರುಪತಿ, ಚಿತ್ತೂರು ಸೇರಿ ಹಲವೆಡೆ ಕಳ್ಳತನ ಮಾಡುತ್ತಿದ್ದ ಪ್ರಸಾದ್ ಬಾಬು, ಕದ್ದ ಬೈಕ್‌ಗಳನ್ನ 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಆರೋಪಿಯಿಂದ 20 ರಾಯಲ್ ಎನ್‌ಫೀಲ್ಡ್ ಬೈಕ್, 30 ಫಲ್ಸರ್ ಬೈಕ್, 40 ಆಕ್ಟಿವಾ ಹಾಗೂ ಇತರೆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ಕಮಿಷನರ್ ತಿಳಿಸಿದ್ದಾರೆ.

ಸುಮಾರು 1.45 ಕೋಟಿ ರೂ. ಮೌಲ್ಯದ 100 ಬೈಕ್ ವಶಕ್ಕೆ ಪಡೆದ ಕೆಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಫೆ.27ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ಪ್ರಕರಣದ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್ ಗುಣಾರೇ, ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ರೀನಾ ಸುವರ್ಣ ಅವರ ಮಾರ್ಗದರ್ಶನದಲ್ಲಿ ಕೆ.ಆರ್ ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಾಮಮೂರ್ತಿ ಬಿ ಹಾಗೂ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದು, ಕೆ ಆರ್ ಪುರ ಪೊಲೀಸ್ ಅಧಿಕಾರಿಗಳ ತಂಡಕ್ಕೆ 50 ಸಾವಿರ ನಗದು ಬಹುಮಾನವನ್ನು ನೀಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

