ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಹಲವೆಡೆ ಅವಾಂತವನ್ನೇ ಸೃಷ್ಟಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಪೌಂಡ್ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಶಿಕಲಾ (35) ಮೃತ ಮಹಿಳೆ.
ಮೃತ ಮಹಿಳೆ ಶಶಿಕಲಾ (35) ಮಹದೇವಪುರದ ಚನ್ನಸಂದ್ರದಲ್ಲಿ ಐ ಝಡ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ನಿತ್ಯದಂತೆ ಇಂದು ಕೆಲಸಕ್ಕೆ ಹೋದಾಗ ಈ ಅವಘಡ ನಡೆದಿದೆ. ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಡೀ ರಾತ್ರಿ ಸುರಿದ ಮಳೆಗೆ ಗೋಡೆ ಸಂಪೂರ್ಣವಾಗಿ ನೆಂದಿದ್ದು, ಏಕಾಏಕಿ ಶಶಿಕಲಾ ಮೇಲೆ ಬಿದ್ದಿದೆ. ಮೃತ ಶಶಿಕಲಾ ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಶಶಿಕಲಾ ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರು ಶಹಾಪುರ ಮೂಲದವರಾಗಿದ್ದಾರೆ. ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಮಹಿಳಾ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ; ಆರೋಪಿ ಬಂಧನ