- ಆ.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ
- ಹನುಮಂತಯ್ಯನವರ 4 ಅಡಿ ಎತ್ತರದ ಬೃಹತ್ ಹೂವಿನ ಪ್ರತಿಮೆ ವಿಶೇಷ ಆಕರ್ಷಣೆ
ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಧಾನಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 214ನೇ ಫಲಪುಷ್ಪ ಪ್ರದರ್ಶನ ಆ.4 ರಿಂದ 15ರವರೆಗೆ ನಡೆಯಲಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಕೆಂಗಲ್ ಹನುಮಂತಯ್ಯನವರ ಹಿರಿಮೆ ಮತ್ತು ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಅನಾವರಣಗೊಳಿಸುವ ಉದ್ದೇಶ ಹೊಂದಲಾಗಿದೆ.
ಈ ಬಗ್ಗೆ ಮಂಗಳವಾರ ಲಾಲ್‌ಬಾಗ್‌ನ ತೋಟಗಾರಿಕಾ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, “ಆ.4ರಂದು ಸಂಜೆ 6ಕ್ಕೆ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಉದಯ್ ಬಿ.ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜತೆಗೆ ನಾನಾ ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ” ಎಂದು ತಿಳಿಸಿದರು.
“ಫಲಪುಷ್ಪ ಪ್ರದರ್ಶನದ ಜತೆಗೆ ನಾನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆ.5ರಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್‍ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಮಾಜಿ ಸಚಿವೆ ಉಮಾಶ್ರೀ ಪಾಲ್ಗೊಳ್ಳಲಿದ್ದಾರೆ” ಎಂದರು.
“ಸುಮಾರು ಎರಡು ಕೋಟಿ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದೆ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಹಿರಿಮೆಯನ್ನು ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹನುಮಂತಯ್ಯನವರ 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಪ್ರತಿಮೆ ವಿಶೇಷ ಆಕರ್ಷಣೆಯಾಗಿರಲಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅವರು ನಿರ್ಮಿಸಿದ ವಿಧಾನಸೌಧದ ಮತ್ತು ಶಿವಪುರ ಸತ್ಯಾಗ್ರಹ ಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸಲಿವೆ. ರೈಲ್ವೇ ಸಚಿವರಾಗಿ ಕೆಂಗಲ್ ಹನುಮಂತಯ್ಯನವರ ಕೊಡುಗೆಗಳನ್ನು ನೆನಪಿಸುವ ಸಲುವಾಗಿ ವರ್ಟಿಕಲ್ ಗಾರ್ಡನ್ ಪರಿಕಲ್ಪನೆಯಲ್ಲಿ ಪುಷ್ಪಗಳಿಂದ ಸಜ್ಜಾದ ರೈಲು ಕೂಡ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
“ಲಕ್ಷಾಂತರ ಎಕ್ಸೋಟಿಕ್ ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಡೈಸ್, ಬ್ರೋಮಿಲಿಯಾಡ್ಸ್, ಆಂಥೂರಿಯಂ, ಹತ್ತಾರು ಬಗೆಯ ವಾರ್ಷಿಕ ಹೂಗಳು ನಾನಾ ಜಾತಿಯ ಗಿಡಗಳನ್ನು ಬಳಸಿ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿಯನ್ನು ವಿನ್ಯಾಸ ಮಾಡಿದೆ. 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಟ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, ಕೆಂಪು ಗುಲಾಬಿ ಶ್ವೇತ ವರ್ಣದ ಸೇವಂತಿಗೆ ಹೂವು ಬಳಸಿ ನಿರ್ಮಿಸಲಾಗುತ್ತಿದೆ. ಇನ್ನು ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ 17 ಅಡಿ ಸುತ್ತಳತೆ ಮತ್ತು 24 ಅಡಿ ಎತ್ತರದ ಧ್ವಜ ಸತ್ಯಾಗ್ರಹದ ಪುಷ್ಪ ಮಾದರಿಗೆ ಬಗೆ ಬಗೆಯ ಸೇವಂತಿಗೆ ಹೂಗಳನ್ನು ಬಳಸಲಾಗುತ್ತಿದೆ. 2200 ಚದರ ಅಡಿಯ ಕಣ್ಮನ ಸೆರೆಯುವ ಮೆಗಾ ಯುರೋಪಿಯನ್ ಫ್ಲೋರಲ್ ಕಾರ್ಪೆಟ್ ಪ್ರದರ್ಶನದ ಕೇಂದ್ರಬಿಂದು ಆಗಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೊಂದು ಮೃತದೇಹವನ್ನು ಬೈಕ್‌ನಲ್ಲಿ ತಂದ ಆರೋಪಿ
“ಎಲ್ಲ ನಾಲ್ಕು ದ್ವಾರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿದ್ದು, ವಾರದ ದಿನಗಳಲ್ಲಿ ₹70 ಮತ್ತು ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ₹80 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 12 ವರ್ಷದ ಕೆಳಗಿನ ಮಕ್ಕಳಿಗೆ ₹30 ಪ್ರವೇಶ ಶುಲ್ಕವಿರಲಿದೆ. ಶಾಲಾ ಉಡುಗೆಯಲ್ಲಿ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ತೋಟಗಾರಿಕೆ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರ, ಗಿಡ-ಮರಗಳ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನಾನಾ ಸ್ಪರ್ಧೆ ಆಯೋಜಿಸಿದೆ. ಮಕ್ಕಳಿಗೆ ಪ್ರಬಂಧ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ನಾನಾ ಸಂಘ-ಸಂಸ್ಥೆ ಮತ್ತು ತರಬೇತಿ ಕೇಂದ್ರದ ಅಭ್ಯರ್ಥಿಗಳಿಗೆ ಹಣ್ಣು-ತರಕಾರಿ ಕೆತ್ತನೆ, ಹೂವಿನ ಜೋಡಣೆ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಎಸ್ ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
“ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆ.14ರಂದು ಲಾಲ್‍ಬಾಗ್‍ನಲ್ಲಿಯೇ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತಿ ಶೂದ್ರ ಶ್ರೀನಿವಾಸ್, ಜಾನಪದ ತಜ್ಞ ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ನಟಿ ರಚಿತಾ ರಾಮ್ ಬಹುಮಾನಗಳನ್ನು ವಿತರಿಸಲಿದ್ದಾರೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಉಪ ನಿರ್ದೇಶಕಿ ಕುಸುಮಾ, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ನಿರ್ದೇಶಕ ಡಿ.ಎಸ್.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.