₹305 ಕೋಟಿ ವೆಚ್ಚದ ಕಸ ವರ್ಗಾವಣೆ ಕೇಂದ್ರ ಯೋಜನೆ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಮೂವರು ಸದಸ್ಯರ ತಂಡವನ್ನು ರಚಿಸಿದೆ.
ಮಂಗಳವಾರ ಈ ಬಗ್ಗೆ ಆದೇಶ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆ 10 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲು ಸಮಿತಿಗೆ ಸೂಚಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಜಿ ಕುಮಾರ್ ನಾಯಕ್, ಬಿಡಿಎ ಎಂಜಿನಿಯರ್ ಸದಸ್ಯ ಶಾಂತರಾಜಣ್ಣ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) ಹಿರಿಯ ಪರಿಸರ ಅಧಿಕಾರಿ ಎಂ.ಜಿ.ಸತೀಶ್ ಸಮಿತಿಯ ಸದಸ್ಯರಾಗಿದ್ದಾರೆ.
ಕಸ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್ ಎಂಎಲ್‌ಸಿ ಪಿಆರ್ ರಮೇಶ್ ಅವರು ಲಿಖಿತ ದೂರು ನೀಡಿದ್ದರು. ದೂರಿನ ಮೇರೆಗೆ ನಗರಾಭಿವೃದ್ಧಿ ಇಲಾಖೆ ಸಮಿತಿಯನ್ನು ರಚಿಸಿದೆ.
ಈ ಸುದ್ದಿ ಓದಿದ್ದೀರಾ? ಪರಿಶಿಷ್ಟರ ₹11,130 ಕೋಟಿ ಹಣ ದುರ್ಬಳಕೆ ವಿರುದ್ಧ ಎಎಪಿಯಿಂದ ಬೃಹತ್ ಪ್ರತಿಭಟನೆ
ಬ್ಯಾಂಕ್ ದಾಖಲೆಗಳು ಇಲ್ಲದಿದ್ದರೂ ಸಹ, ಯೋಜನೆಯನ್ನು ಕೈಗೆತ್ತಿಕೊಂಡ ಕಂಪನಿಗೆ ಬಿಬಿಎಂಪಿ ಹಣ ಬಿಡುಗಡೆ ಮಾಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಅಧಿಕಾರಕ್ಕೆ ಬಂದ ನಂತರ ನೂತನ ಸರ್ಕಾರ ರಚಿಸಿರುವ ಎರಡನೇ ಸಮಿತಿ ಇದಾಗಿದೆ. ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ಗೆ (ಕೆಆರ್‌ಐಡಿಎಲ್) ಹಸ್ತಾಂತರಿಸಲಾದ ಎಲ್ಲ ಬಿಬಿಎಂಪಿ ಕಾಮಗಾರಿಗಳ ತನಿಖೆಗಾಗಿ ಈ ಹಿಂದೆ ಇಬ್ಬರು ಸದಸ್ಯರ ತಂಡವನ್ನು ರಚಿಸಿತ್ತು.