- ದಾಖಲಾಗಿರುವ ಪ್ರಕರಣಗಳಲ್ಲಿ 11,895 ಪ್ರಕರಣಗಳನ್ನು ಮಾತ್ರ ಬಗೆಹರಿಸಲಾಗಿದೆ
- ಸೈಬರ್ ಅಪರಾಧ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಕೆಲಸ
ಬೆಂಗಳೂರಿನಲ್ಲಿ 2017ರಿಂದ ಮೇ 31ರವರೆಗೆ 50 ಸಾವಿರಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ.23ರಷ್ಟು ಪ್ರಕರಣಗಳು ಮಾತ್ರ ಬಗೆಹರಿದಿದ್ದು, 29 ಮಂದಿಗಷ್ಟೇ ಶಿಕ್ಷೆಯಾಗಿದೆ.
ಸೈಬರ್ ಅಪರಾಧಗಳ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಉತ್ತರ ನೀಡಿದ್ದು, ಅಂಕಿಅಂಶಗಳ ಮಾಹಿತಿ ಹಂಚಿಕೊಂಡಿದ್ದಾರೆ.
“ಸುಮಾರು ಆರೂವರೆ ವರ್ಷಗಳಲ್ಲಿ ದಾಖಲಾದ 50,027 ಸೈಬರ್ ಅಪರಾಧಗಳಲ್ಲಿ 2019ರಲ್ಲಿ ಅತಿ ಹೆಚ್ಚು (10,553) ಪ್ರಕರಣಗಳು ಮತ್ತು 2017ರಲ್ಲಿ ಕಡಿಮೆ (2,742) ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 9,940 ಪ್ರಕರಣಗಳು ದಾಖಲಾಗಿದ್ದರೆ, 2023ರ ಮೊದಲ ಐದು ತಿಂಗಳಲ್ಲಿ 6,226 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ.
“ಇದೂವರೆಗೂ ದಾಖಲಾಗಿರುವ ಪ್ರಕರಣಗಳಲ್ಲಿ 11,895 ಪ್ರಕರಣಗಳನ್ನು ಮಾತ್ರ ಬಗೆಹರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಡೇಟಾದ ಪ್ರಕಾರ, 41% ಪ್ರಕರಣಗಳು (20,662) ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು ಆನ್‌ಲೈನ್‌ನಲ್ಲಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿವೆ. 18% ಪ್ರಕರಣಗಳು (9,198 ಪ್ರಕರಣಗಳು) ಮುಂಗಡ ಶುಲ್ಕ ಪಾವತಿ ವಂಚನೆ ಹಾಗೂ 10% ಪ್ರಕರಣಗಳು (5,012) ಕಾರ್ಡ್ ಸ್ಕಿಮ್ಮಿಂಗ್ (ಕಾರ್ಡ್ ಡೇಟಾ ಕದಿಯುವುದು) ವಂಚನೆಗೆ ಸಂಬಂಧಿಸಿವೆ” ಎಂದು ಅವರು ವಿವರಿಸಿದ್ದಾರೆ.
“ಮುಂಗಡ ಶುಲ್ಕ/ಉಡುಗೊರೆ ವಂಚನೆಗಳಲ್ಲಿ ಆನ್‌ಲೈನ್ ವಂಚಕರು ತಮಗೆ ಉಡುಗೊರೆಗಳನ್ನು ಕಳುಹಿಸಲಾಗಿದೆ. ಅವುಗಳನ್ನು ನೀವು ಪಡೆದುಕೊಳ್ಳಲು ನಾನಾ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ ಸಂತ್ರಸ್ತರಿಂದ ಹಣವನ್ನು ಪಡೆದುಕೊಳ್ಳುತ್ತಾರೆ. ಆದರೆ, ಯಾವುದೇ ಉಡುಗೊರೆಗಳು ಸಂತ್ರಸ್ತರನ್ನು ತಲುಪುವುದಿಲ್ಲ” ಎಂದಿದ್ದಾರೆ.
“ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಕೆಲಸವಾಗಿದೆ. ವಂಚಕರು ಪ್ರತಿದಿನ ಹೊಸ ತಂತ್ರಗಳನ್ನು ಬಳಸಿ, ಜನರನ್ನು ವಂಚಿಸುತ್ತಿದ್ದಾರೆ. ಹೊಸ ರೀತಿಯ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು” ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ನಾವು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದೇವೆ. ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಆದರೂ, ಜನರು ವಂಚನೆಗೆ ಬಲಿಯಾಗುತ್ತಿದ್ದಾರೆ. ಜಾಗೃತಿ ಕಾರ್ಯಕ್ರಮಗಳ ಭಾಗವಾಗಿ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ಯುತ್ತಮ ಆರ್.ಆರ್.ಆರ್ ನಗರವಾಗಿ ಆಯ್ಕೆಯಾದ ಬಿಬಿಎಂಪಿ
“ಪೊಲೀಸರು ಕೂಡ ವಂಚಕರ ಜಾಡು ಹಿಡಿಯಲು ನಾನಾ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ಪ್ರಕರಣಗಳನ್ನು ಪರಿಹರಿಸಲು ಪೊಲೀಸ್ ಸಿಬ್ಬಂದಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದೇವೆ” ಎಂದಿದ್ದಾರೆ.